ಪಡುಬಿದ್ರೆ: ಹೆದ್ದಾರಿ ಮಧ್ಯೆ ಹೊತ್ತಿ ಉರಿದ ಲಾರಿ
Update: 2016-09-22 19:46 IST
ಪಡುಬಿದ್ರೆ, ಸೆ.22: ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳು ಬಳಿ ಸಂಚರಿಸುತಿದ್ದ ಲಾರಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಸುವ ನವಯುಗ್ ಸಂಸ್ಥೆಗೆ ಸೇರಿದ ಲಾರಿಯಲ್ಲಿ ಸಿಮೆಂಟ್ ಮಿಶ್ರಿತ ಜಲ್ಲಿಹುಡಿಯನ್ನು ಪಲಿಮಾರಿನಿಂದ ಅಂಬಲ್ಪಾಡಿಗೆ ಸಾಗಿಸಲಾಗುತಿತ್ತು. ಎರ್ಮಾಳಿನ ಪೆಟ್ರೋಲ್ ಬಂಕ್ ಬಳಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಚಾಲಕ ತಕ್ಷಣ ಲಾರಿಯನ್ನು ನಿಲ್ಲಿಸಿದ್ದನು. ಸ್ಥಳೀಯರು ಕೂಡಲೇ ಮನೆಯೊಂದರಿಂದ ಪೈಪ್ ಮೂಲಕ ನೀರು ಹಾಯಿಸಿ ಬೆಂಕಿ ನಂದಿಸಲು ಯತ್ನಿಸಿದರು. ಬಳಿಕ ಟ್ಯಾಂಕರ್ ಮೂಲಕ ನೀರನ್ನು ಸಿಂಪಡಿಸಿ ಬೆಂಕಿಯನ್ನು ನಂದಿಸಲಾಯಿತು.
ಸಂಚಾರ ಅಸ್ತವ್ಯಸ್ತ
ಹೆದ್ದಾರಿಯ ಮಧ್ಯದಲ್ಲೇ ಘಟನೆ ನಡೆದಿದ್ದರಿಂದ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಪಡುಬಿದ್ರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು.