ಕಲ್ಲಬೆಟ್ಟು-ಕರಿಂಜೆ ವ್ಯಾಪ್ತಿಯಲ್ಲಿ ಚಿರತೆ ಹಾವಳಿ
ಮೂಡುಬಿದಿರೆ, ಸೆ.22: ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು-ಕರಿಂಜೆ ವ್ಯಾಪ್ತಿಯಲ್ಲಿ ಕಳೆದ 5 ದಿನಗಳಿಂದ ಚಿರತೆಯೊಂದು ರೌಂಡ್ಸ್ ಹೊಡೆಯುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮೂಡುಬಿದಿರೆ ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡು ಬೋನು ಅಳವಡಿಸಿ ಟ್ರಾಪಿಂಗ್ ಕ್ಯಾಮರಾವನ್ನು ಅಳವಡಿಸಿದ್ದಾರೆ.
ಕಳೆದ ಐದು ದಿನಗಳ ಹಿಂದೆ ಕಲ್ಲಬೆಟ್ಟು ಗ್ರಾಮದ ಬಂಗಾಲಪದವಿನಲ್ಲಿ ರಸ್ತೆ ಬದಿಯಲ್ಲಿ ಚಿರತೆಯೊಂದು ಸುಳಿದಾಡಿರುವ ಬಗ್ಗೆ ಬೈಕ್ ಸವಾರರೊಬ್ಬರ ಗಮನಕ್ಕೆ ಬಂದಿತ್ತು. ಆದರೆ ಈ ಬಗ್ಗೆ ಯಾರೂ ಹೆಚ್ಚಿನ ಗಮನ ಹರಿಸಿರಲಿಲ್ಲ. ಎರಡು ದಿನಗಳ ನಂತರ ಇದೇ ಗ್ರಾಮ ಗೊಲ್ಲ ಎಂಬಲ್ಲಿನ ಹಾಡಿಯಲ್ಲಿ ಚಿರತೆ ಇರುವ ಬಗ್ಗೆ ಗ್ರಾಮಸ್ಥರೊಬ್ಬರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದು ಸ್ಥಳಕ್ಕೆ ಆಗಮನಿಸಿ ಪರಿಶೀಲನೆ ನಡೆಸಿದ್ದರು.
ಅದರ ಹಿಂದಿನ ದಿನ ರಾತ್ರಿ ಕರಿಂಜೆಯ ಗಾಂದೊಟ್ಟು ಭಾಸ್ಕರ್ ಶೆಟ್ಟಿ ಎಂಬವರ ದನ ಕೊಟ್ಟಿಗೆಗೆ ನುಗ್ಗಿದ ಚಿರತೆಯು ದನದ ಮೇಲೆ ದಾಳಿ ಮಾಡಲು ಯತ್ನಿಸಿದಾಗ ನಾಯಿಗಳ ಬೊಗಳಿದಾಗ ಮನೆ ಮಂದಿ ಎಚ್ಚೆತ್ತು ಹೊರಗೆ ಬಂದಾಗ ಚಿರತೆಯು ಓಡಿ ಹೋಗಿದೆ. ಕೊಟ್ಟಿಗೆಯಲ್ಲಿದ್ದ ದನಗಳ ಪೈಕಿ ಒಂದು ದನಕ್ಕೆ ಪರಚಿದ ಗಾಯಗಳಾಗಿತ್ತು.
ನಂತರ ಮಂಗಳವಾರ ಅರಣ್ಯಾಧಿಕಾರಿಗಳು ಕರಿಂಜೆಯ ಗಾಂದೊಟ್ಟು ಪ್ರದೇಶದಲ್ಲಿ ಬೋನನ್ನು ಅಳವಡಿಸಿದ್ದಾರೆ. ಆದರೆ ಮತ್ತೆ ಅದೇ ಪ್ರದೇಶದಲ್ಲಿ ಗುರುವಾರದಂದು ದಾರಿ ಹೋಕರೊಬ್ಬರಿಗೆ ಚಿರತೆಯು ಕಂಡು ಬಂದಿದೆ.
ಈ ಸಂದರ್ಭದಲ್ಲಿ ಮೂಡುಬಿದಿರೆ ವಲಯಾರಣ್ಯಾಧಿಕಾರಿ ಜಿ.ಡಿ. ದಿನೇಶ್‌ರ ನೇತೃತ್ವದಲ್ಲಿ ಉಪವಲಯಾರಣ್ಯಾಧಿಕಾರಿ ಅನಿಲ್, ಪ್ರಕಾಶ್ ಶೆಟ್ಟಿ ಸಹಿತ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಟ್ರಾಪಿಂಗ್ ಕ್ಯಾಮರಾವನ್ನು ಅಳವಡಿಸಿ ಬಂದಿದ್ದಾರೆ.