ಕೋಟ ಎಸ್ಸೈ ಕಬ್ಬಾಳ್‌ರಾಜ್ ರಾಜೀನಾಮೆ
ಉಡುಪಿ, ಸೆ.22: ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಕಬ್ಬಳ್ ರಾಜ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಬ್ಬಳ್‌ರಾಜ್ ತನ್ನ ರಾಜೀನಾಮೆ ಪತ್ರದಲ್ಲಿ ‘ವೈಯಕ್ತಿಕ ಜೀವನದಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಲು ಅಸಾಧ್ಯವಾದ ಕಾರಣ ಸ್ವಇಚ್ಛೆಯಿಂದ ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇವರು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಮೂಲಕ ಮಂಗಳೂರು ಪಶ್ಚಿಮ ವಲಯ ಐಜಿಪಿಗೆ ರಾಜೀನಾಮೆ ಪತ್ರವನ್ನು ಬರೆದಿದ್ದಾರೆ.
ಇಂದು ಠಾಣೆಯಲ್ಲಿ ಪತ್ರವನ್ನು ಬರೆದಿಟ್ಟು ರಿವಾಲ್ವರ್, ಇಲಾಖೆಯ ಮೊಬೈಲ್‌ನ್ನು ಬಿಟ್ಟು ತನ್ನ ಖಾಸಗಿ ವಾಹನದಲ್ಲಿ ತೆರಳಿದ್ದಾರೆ. ಅವರ ವೈಯಕ್ತಿಕ ಮೊಬೈಲ್‌ನ್ನು ಸ್ವಿಚ್ ಆಫ್ ಮಾಡಲಾಗಿದೆ. ಈ ಪತ್ರವನ್ನು ಎಸ್ಪಿ ಕೆ.ಟಿ.ಬಾಲಕೃಷ್ಣ ಬ್ರಹ್ಮಾವರ ವೃತ್ತ ನಿರೀಕ್ಷಕರ ಮೂಲಕ ತರಿಸಿಕೊಂಡಿದ್ದಾರೆ.
ರಾಮನಗರ ನಿವಾಸಿಯಾಗಿರುವ ಕಬ್ಬಾಳ್‌ರಾಜ್ ರ ಪತ್ನಿ ಬಂಟ್ವಾಳದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕೂಡ ಇವರು ಇದೇ ರೀತಿ ರಾಜೀನಾಮೆ ಸಲ್ಲಿಸಿ, ಯಾರ ಸಂಪರ್ಕಕ್ಕೂ ಸಿಗದೆ ಕಣ್ಮರೆಯಾಗಿದ್ದರು. ಆಗಲೂ ವೈಯಕ್ತಿಕ ಕಾರಣ ಎಂದು ಹೇಳಿಕೊಂಡಿದ್ದರು. ನಂತರ ಹಿರಿಯ ಅಧಿಕಾರಿಗಳು ಮನವರಿಕೆ ಮಾಡಿದ ಪರಿಣಾಮ ಅವರು ರಾಜೀನಾಮೆ ಪತ್ರವನ್ನು ವಾಪಸ್ಸು ಪಡೆದು ಕೊಂಡಿದ್ದರು. ಅದೇ ರೀತಿ ಕಬ್ಬಾಳ್‌ರಾಜ್ ವಿರುದ್ಧ ಲಾರಿ ಚಾಲಕರೊಬ್ಬರಿಗೆ ಠಾಣೆಯಲ್ಲಿ ಹಿಂಸೆ ನೀಡಿರುವ ಆರೋಪ ಕೂಡ ಇತ್ತು.
‘ಕಬ್ಬಾಳ್‌ರಾಜ್ ವೈಯಕ್ತಿಕ ಕಾರಣಕ್ಕೆ ನನ್ನ ಮೂಲಕ ಐಜಿಪಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಸದ್ಯಕ್ಕೆ ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಮುಂದೆ ಅವರನ್ನು ಸಂಪರ್ಕಿಸಿ ರಾಜೀನಾಮೆ ವಾಪಸ್ಸು ಪಡೆಯುವಂತೆ ಮನವರಿಕೆ ಮಾಡಲಾಗುವುದು. ಇದು ಕೂಡ ನಮ್ಮ ಕರ್ತವ್ಯದ ಒಂದು ಭಾಗವಾಗಿದೆ’ ಎಂದು ಎಸ್ಪಿ ಕೆ.ಟಿ.ಬಾಲಕೃಷ್ಣ ಪತ್ರಿಕೆಗೆ ತಿಳಿಸಿದ್ದಾರೆ.
ರಾಜೀನಾಮೆಗೆ ಎಸ್ಪಿ ಕಿರುಕುಳ ವದಂತಿ
ಐರೋಡಿ ಜಾಗದ ತಕರಾರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎಸ್ಪಿ ಕೆ.ಟಿ.ಬಾಲಕೃಷ್ಣ ಬೈಯ್ದ ಕಾರಣ ಕಬ್ಬಾಳ್‌ರಾಜ್ ರಾಜೀನಾಮೆ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಐರೋಡಿಯ ಸುಬ್ರಹ್ಮಣ್ಯ ಎಂಬವರ ಜಾಗದ ವಿಚಾರ ನ್ಯಾಯಾಲಯ ದಲ್ಲಿದ್ದು, ಕಬ್ಬಾಳ್‌ರಾಜ್ ಹಿರಿಯ ನಾಗರಿಕರ ಆಸ್ತಿಪಾಸ್ತಿ ರಕ್ಷಣೆ ಮಾಡುವ ಬದಲು ಬಿಲ್ಡರ್‌ಗಳ ಪರವಾಗಿ ವರ್ತಿಸುತ್ತಿದ್ದರು. ಈ ಬಗ್ಗೆ ಆ ಸುಬ್ರಹ್ಮಣ್ಯ ಇತ್ತೀಚೆಗೆ ಎಸ್ಪಿಗೆ ದೂರು ನೀಡಿದ್ದರು. ಅದರಂತೆ ಎಸ್ಪಿ ಕಬ್ಬಾಳ್‌ರಾಜ್‌ಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದರು ಎಂದು ಹೇಳಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಸ್ಪಿ ಬಾಲಕೃಷ್ಣ, ಐರೋಡಿ ಪ್ರಕರಣದಲ್ಲಿ ಕಬ್ಬಾಳ್‌ರಾಜ್‌ಗೆ ನಾನು ತಿಳುವಳಿಕೆ ಹೇಳಿರುವುದು ನಿಜ. ಆದರೆ ಅವರು ಆ ಕಾರಣಕ್ಕೆ ರಾಜೀನಾಮೆ ನೀಡಿಲ್ಲ. ಐರೋಡಿ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅವರ ಆಸ್ತಿಪಾಸ್ತಿ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಆ ಬಗ್ಗೆ ಅವರಿಗೆ ತಿಳುವಳಿಕೆ ನೀಡಿದ್ದೇನೆ ಎಂದರು.