‘ಮಂಡಳಿ ರಚನೆ’ ನ್ಯಾಯಾಲಯದ ಏಕಪಕ್ಷೀಯ ನಿರ್ಧಾರ: ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ
ಬೆಂಗಳೂರು, ಸೆ. 22: ಕಾವೇರಿ ನದಿ ನೀರಿನ ಹಂಚಿಕೆ ಸಂಬಂಧ ಉಭಯ ರಾಜ್ಯಗಳು ಮನವಿ ಸಲ್ಲಿಸದಿದ್ದರೂ, ‘ಕಾವೇರಿ ನೀರಿ ನಿರ್ವಹಣಾ ಮಂಡಳಿ’ ರಚನೆಗೆ ಸುಪ್ರೀಂ ಕೋರ್ಟ್ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ವಿಧಾನಸೌಧ ಮತ್ತು ವಿಕಾಸಸೌಧ ಮಧ್ಯದಲ್ಲಿರುವ ಗಾಂಧಿ ಪುತ್ಥಳಿ ಬಳಿ ತಮಿಳುನಾಡಿಗೆ ನೀರು ಹರಿಸುವ ಸಂಬಂಧದ ಸುಪ್ರೀಂ ಕೋರ್ಟ್ ತೀರ್ಪು ಖಂಡಿಸಿ ನಡೆದ ಕಾಂಗ್ರೆಸ್ ಸಂಸದರ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೋರ್ಟ್ ತೀರ್ಪಿನಿಂದ ರಾಜ್ಯದ ಜನತೆ ಆತಂಕ-ಆಘಾತಕ್ಕೆ ಒಳಗಾಗಿದ್ದು, ರಾಜ್ಯದ ಪಾಲಿಗೆ ಇದೊಂದು ಮಾರಕ ಆದೇಶವಾಗಿದೆ ಎಂದು ವಿಶ್ಲೇಷಿಸಿದರು.
ಕಾಣದ ಕೈಗಳ ಕೈವಾಡ: ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ಕೋರ್ಟ್ ತೀರ್ಪನ್ನು ಗಮನಿಸಿದರೆ ಇದರ ಹಿಂದೆ ಕಾಣದ ಕೈಗಳ ಕೈವಾಡ ಇರುವ ಸಾಧ್ಯತೆಗಳಿವೆ ಎಂದು ಸಂಶಯ ವ್ಯಕ್ತಪಡಿಸಿದ ಅವರು, ಬೆಂಗಳೂರು ಅಭಿವೃದ್ಧಿ ಸಹಿಸದ ವ್ಯಕ್ತಿಗಳು ಇಂತಹ ತೀರ್ಪಿನ ಹಿಂದಿದ್ದಾರೆ ಎಂದು ಟೀಕಿಸಿದರು.
ವಿದೇಶಗಳಿಂದ ರಾಜ್ಯಕ್ಕೆ ಹರಿದು ಬರುತ್ತಿರುವ ಬಂಡವಾಳವನ್ನು ತಡೆ ಹಿಡಿಯುವ ದೃಷ್ಟಿಯಿಂದ ಇಂತಹ ತೀರ್ಪು ನೀಡಿರುವ ಸಾಧ್ಯತೆಗಳಿವೆ ಎಂದ ಅವರು, ಯಾವುದೇ ಮಾನದಂಡ ಅನುಸರಿಸದೆ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಮಧ್ಯಸ್ಥಿಕೆ ಅಗತ್ಯ: ಕಾವೇರಿ ನದಿ ನೀರಿನ ಹಂಚಿಕೆ ಸಮಸ್ಯೆ ಇತ್ಯರ್ಥಕ್ಕೆ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸದೆ ಇದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂಬುದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ಪ್ರಧಾನಿ ಮೋದಿ ಕೂಡಲೇ ಮಧ್ಯ ಪ್ರವೇಶಿಸಿ ಉಭಯ ರಾಜ್ಯಗಳ ನಡುವಿನ ವಿವಾದಕ್ಕೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು.
ಕಾವೇರಿ ನದಿ ನೀರಿನ ಹಂಚಿಕೆ ಸಂಬಂಧ ಕೋರ್ಟ್ ತೀರ್ಪು ವಿರೋಧಿಸಿ, ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವವರೆಗೂ ಕಾಂಗ್ರೆಸ್ ಪಕ್ಷದ ಎಲ್ಲ ಸಂಸದರು ಲೋಕಸಭೆ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಾಗುವುದು ಎಂದು ಖರ್ಗೆ ಇದೇ ವೇಳೆ ತಿಳಿಸಿದರು.
ವಾಸ್ತವತೆ ಅರಿವಿಲ್ಲ: ಕಾವೇರಿ ಜಲಾನಯನ ಪ್ರದೇಶದಲ್ಲಿನ ಜಲಾಶಯಗಳ ನೀರಿನ ಮಟ್ಟದ ವಾಸ್ತವತೆಯ ಅರಿವಿಲ್ಲದೆ ನ್ಯಾಯಾಧೀಶರು ತೀರ್ಪು ನೀಡಿದ್ದು, ಕನಿಷ್ಠಪಕ್ಷ ನೀರಿನ ಲಭ್ಯತೆ ಸ್ಥಿತಿಯನ್ನು ಅಧ್ಯಯನಕ್ಕೆ ಸಮಿತಿ ರಚಿಸಿ, ಆ ಬಳಿಕ ಉಭಯ ರಾಜ್ಯಗಳಿಗೆ ಅನುಕೂಲ ಆಗುವ ತೀರ್ಪು ನೀಡಬಹುದಿತ್ತು ಎಂದು ಸಂಸದ ಕೆ.ಎಚ್. ಮುನಿಯಪ್ಪ ಆಗ್ರಹಿಸಿದರು.
ಖರ್ಗೆ ನೇತೃತ್ವದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಪಕ್ಷದ ಸಂಸದರಾದ ಮುದ್ದಹನುಮೇಗೌಡ, ಧೃವನಾರಾಯಣ್, ಡಿ.ಕೆ.ಸುರೇಶ್, ಎಂ.ಚಂದ್ರಪ್ಪ, ರಾಜ್ಯಸಭೆ ಸದಸ್ಯರಾದ ಪ್ರೊ.ರಾಜೀವ್ ಗೌಡ, ಕೆ.ಸಿ.ರಾಮಮೂರ್ತಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು.