ಬೇಕಿತ್ತೇ ಈ ಅಚ್ಛೇ ದಿನ್?

Update: 2016-09-23 05:25 GMT

ಆದಾಯ ತೆರಿಗೆ ಇಲಾಖೆ ತಮ್ಮ ಆದಾಯ ಘೋಷಣೆ ಯೋಜನೆಯ (ಐಡಿಎಸ್) ಯಶಸ್ಸಿಗೆ ಯಾವ ಅವಕಾಶವನ್ನೂ ಬಿಡುತ್ತಿಲ್ಲ. ಸೆಪ್ಟೆಂಬರ್ 30ರ ಅಂತಿಮಗಡುವಿಗೆ ಇನ್ನೂ 10 ದಿನಗಳು ಕಡಿಮೆ ಇರುವಾಗ ಸಣ್ಣ ಉದ್ಯಮಿಗಳು, ರಸ್ತೆಬದಿಯ ಆಹಾರ ಮಳಿಗೆಗಳು ಮೊದಲಾದ ಹಿಂದೆಂದೂ ಐಟಿ ಅಧಿಕಾರಿಗಳನ್ನೂ ನೋಡದವರು ತೆರಿಗೆ ಬಿಸಿಯನ್ನು ಎದುರಿಸುತ್ತಿದ್ದಾರೆ. ಮುಂಬೈ ಮಾತ್ರದಲ್ಲಿಯೇ ಸುಮಾರು 50 ಇಂತಹ ಮಳಿಗೆಗಳು, ಥಾಣೆಯಲ್ಲಿ ಪ್ರಸಿದ್ಧ ವಡಾಪಾವ್ ಕೇಂದ್ರಗಳು, ಘಾಟ್ಕೊಪ್ಪರ್‌ನ ದೋಸಾ ಕೇಂದ್ರ, ಅಂಧೇರಿಯ ಸ್ಯಾಂಡ್‌ವಿಚ್ ಕೇಂದ್ರ ಮತ್ತು ದಕ್ಷಿಣ ಮುಂಬೈನ ಜಲೇಬಿವಾಲ ಮೊದಲಾದ ಮಳಿಗೆಗಳಿಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಮಾಲೀಕರ ಬಳಿ ತಮ್ಮ ಕಪ್ಪು ಹಣವನ್ನು ಐಡಿಎಸ್ ಅಡಿಯಲ್ಲಿ ಘೋಷಿಸುವಂತೆ ಹೇಳಿದ್ದಾರೆ. ಅಲ್ಲದೆ ಅಹಮದಾಬಾದ್ ಮತ್ತು ನವದೆಹಲಿ, ಕೊಲ್ಕತ್ತಾಗಳ ಪ್ರಸಿದ್ಧ ಮಳಿಗೆಗಳಲ್ಲೂ 100ಕ್ಕೂ ಅಧಿಕ ದಾಳಿಗಳು ನಡೆದಿವೆ.

ಈ ದಾಳಿಗಳನ್ನು ತೆರಿಗೆ ವಿಭಾಗ ಕಳೆದ ಆರು ತಿಂಗಳಿಂದ ಪಡೆದ ಮಾಹಿತಿಯನ್ನು ಅನುಸರಿಸಿ ನಡೆಸಲಾಗಿದೆ. ತೆರಿಗೆ ಅಧಿಕಾರಿಗಳ ಪ್ರಕಾರ ಸುಮಾರು 1 ಲಕ್ಷ ಸಣ್ಣ ಉದ್ಯಮಿಗಳು ಮತ್ತು ಅಂಗಡಿ ಮಾಲೀಕರನ್ನು ತೆರಿಗೆಗಳ್ಳರೆಂದು ಗುರುತಿಸಿದ್ದು, ಪ್ರತೀ ನಗರಕ್ಕೂ ಒಂದು ಗುರಿಯನ್ನು ಸರ್ಕಾರ ಇಟ್ಟಿದೆ. ಮುಂಬೈ ಮತ್ತು ನವದೆಹಲಿಯಲ್ಲಿ ತೆರಿಗೆ ವಿಭಾಗಕ್ಕೆ ರೂ. 2500 ಕೋಟಿ ಗುರಿ ನೀಡಲಾಗಿದೆ. ಹೀಗಾಗಿ ಕಳೆದ ಒಂದು ವಾರದಿಂದ ದಾಳಿ ಮತ್ತು ಸಮೀಕ್ಷೆಗಳು ಹೆಚ್ಚಾಗಿವೆ. “ನನ್ನ 25 ವರ್ಷಗಳ ಅನುಭವದಲ್ಲಿ ಹೀಗೆ ಆಹಾರ ಮಳಿಗೆಗಳಿಗೆ ತೆರಿಗೆ ದಾಳಿಯನ್ನು ಕೇಳಿಯೇ ಇಲ್ಲ. ಮಳಿಗೆಗಳಿಂದ ಮತ್ತು ಹಲವು ವ್ಯಾಪಾರಿಗಳಿಂದ ನಗದನ್ನು ವಶಪಡಿಸಿಕೊಂಡಿದ್ದಾರೆ. ಹಿಂದೆಂದೂ ತೆರಿಗೆ ಅಧಿಕಾರಿಗಳ ಮುಖ ನೋಡದ ಇವರು ಅಚ್ಚರಿಯಲ್ಲಿದ್ದಾರೆ” ಎನ್ನುವುದು ಮುಂಬೈಯ ಕೆಲ ವ್ಯಾಪಾರಿಗಳಿಗೆ ಸಲಹೆ ನೀಡುತ್ತಿರುವ ಚಾರ್ಟರ್ಡ್ ಅಕೌಂಟಂಟ್ ಒಬ್ಬರ ಅಭಿಪ್ರಾಯ. ಒಂದು ಅಂದಾಜಿನ ಪ್ರಕಾರ ರೂ. 2 ಕೋಟಿ ವಶಪಡಿಸಿಕೊಳ್ಳಲಾಗಿದೆ.

ಈ ದಾಳಿಯ ತೀವ್ರತೆಯನ್ನು ಇನ್ನೂ ಹೆಚ್ಚಿಸಲಾಗುವುದು. ಈ ಬಗ್ಗೆ ಮಾಹಿತಿಯಿರುವ ಅಧಿಕಾರಿಗಳ ಪ್ರಕಾರ ತೆರಿಗೆ ಅಧಿಕಾರಿಗಳು ಇಂತಹ 1000 ದಾಳಿಗಳನ್ನು ಅಥವಾ ಸಮೀಕ್ಷೆಗಳನ್ನು ದೇಶದಾದ್ಯಂತ ಸೆಪ್ಟೆಂಬರ್ 30ರವರೆಗೆ ನಡೆಸಲಿದ್ದಾರೆ. “ಆದಾಯ ತೆರಿಗೆ ಅಧಿಕಾರಿಗಳು ಹಿಂದೆ ಬಿದ್ದಿರುವ ಹಿನ್ನೆಲೆಯಲ್ಲಿ ಬಹಳಷ್ಟು ಸಣ್ಣ ಉದ್ಯಮಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ತೆರಿಗೆ ಅಧಿಕಾರಿಗಳು ತೆರಿಗೆದಾರರನ್ನು ಐಡಿಎಸ್‌ನಲ್ಲಿ ಎಲ್ಲಾ ಹಣವನ್ನು ಘೋಷಿಸುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ತೆರಿಗೆ ಸಲಹೆಗಾರರಾದ ಕೆಪಿಬಿ ಆ್ಯಂಡ್ ಅಸೋಸಿಯೇಟ್ಸ್ ಸಹಯೋಗಿ ಪರಸ್ ಸಾಲ್ವಾ ಹೇಳಿದ್ದಾರೆ. ಸುಮರು 400 ತೆರಿಗೆ ಅಧಿಕಾರಿಗಳು ಮುಂಬೈನ ಖೌ ಗಲ್ಲಿಯಲ್ಲಿಯೇ ಬೀಡುಬಿಟ್ಟು ಕಾರ್ಯನಿರ್ವಹಿಸಿದರು. ಸಮಾಂತರವಾಗಿ ಮುಂಬೈ, ದೆಹಲಿ ಮತ್ತು ಕೊಲ್ಕತ್ತಾದ ಇತರ ವ್ಯಾಪಾರಿಗಳ ಮೇಲೂ ಕಾರ್ಯನಿರ್ವಹಿಸಿದ್ದಾರೆ. ಪ್ರಮುಖ ನಗರಗಳಲ್ಲಿ ಕನಿಷ್ಠ 20 ದಾಳಿಗಳನ್ನು ದಿನವೂ ನಡೆಸಲಾಗುತ್ತಿದೆ. “ಪೆನ್ನಿ ಸ್ಟಾಕ್ಸ್ ಹೊಂದಿದವರು ಮತ್ತು ಪಾರ್ಟಿ ವ್ಯವಹಾರಗಳನ್ನು ಹೊಂದಿದವರನ್ನೂ ಪ್ರಶ್ನಿಸಲಾಗಿದೆ. ಅಚ್ಚರಿಯೆಂದರೆ ರಿಟರ್ನ್ಸ್ ಸಲ್ಲಿಸಿದ ಬಹಳಷ್ಟು ಕಂಪನಿಗಳನ್ನೂ ಐಡಿಎಸ್ ಅಡಿಯಲ್ಲಿ ಆದಾಯ ಘೋಷಿಸಲು ಹೇಳಿರುವುದು ಅಚ್ಚರಿ ತಂದಿದೆ” ಎಂದು ಕೊಲ್ಕತ್ತಾದ ತೆರಿಗೆ ವಿಷಯಗಳ ಸಂಸ್ಥೆಯೊಂದು ಹೇಳಿದೆ. ಕಂಪನಿಗಳ ವೆಚ್ಚ ಮತ್ತು ತೆರಿಗೆ ಕಡಿತಗಳ ವಿವರಗಳನ್ನೂ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಕೆಲವು ರಿಯಲ್ ಎಸ್ಟೇಟ್ ವ್ಯವಹಾರಸ್ಥರ ಮೇಲೂ ದಾಳಿಗಳು ನಡೆದಿವೆ.

ಕೃಪೆ:timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News