ಪೆಪ್ಸಿ ಜಾಹೀರಾತು: ಬಯಲಾಯ್ತು ವಿರಾಟ್ ದ್ವಂದ್ವ ನಿಲುವು
ಹೊಸದಿಲ್ಲಿ, ಸೆ.23: ಭಾರತದ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಗೆ ಭಾರತದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರಿಗೆಲ್ಲಾ ಕೊಹ್ಲಿ ಒಂದು ವಿಧದಲ್ಲಿ ಮಾದರಿಯಿದ್ದಂತೆ. ಕೊಹ್ಲಿಯವರು ಫಿಟ್‌ನೆಸ್ ಬಗ್ಗೆ ತೀವ್ರ ಕಾಳಜಿ ಹೊಂದಿರುವವರುಹಾಗೂ ಪ್ರೊಟೀನ್ ಸಮೃದ್ಧಿ ಡಯಟ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವವರೆಂರು ಈಗಾಗಲೇ ಜನಜನಿತ. ಅವರ ಹಾಗೆಯೇ ಟೀಮ್ ಇಂಡಿಯಾದ ಇತರ ಸದಸ್ಯರೂ ಪ್ರೊಟೀನ್ ಸಮೃದ್ಧ ಡಯಟ್ ಸೇವಿಸಬೇಕೆಂಬ ಇಚ್ಛೆಯಿಂದ ಭಾರತ ತಂಡ ದೇಶದ ವಿವಿಧೆಡೆ ಹೋಗುವಲ್ಲೆಲ್ಲಾ ಅಂತಹ ಆಹಾರವನ್ನೇ ಒದಗಿಸಬೇಕೆಂದು ಬಿಸಿಸಿಐ ಸಂಬಂಧಿತರಿಗೆ ಇಮೇಲ್ ಕೂಡ ಕಳುಹಿಸಿ ಕೊಟ್ಟಿದೆ. ಕೊಹ್ಲಿ ಏರೇಟೆಡ್ ಪ್ಯಾಕೇಜ್ಡ್ ಡ್ರಿಂಕ್ ಗಳಿಗೂ ವಿರುದ್ಧವಾಗಿದ್ದು ಬ್ಲೆಂಡರ್ ಕೂಡ ಒದಗಿಸುವಂತೆ ಹೇಳಲಾಗಿದೆ.
ಆದರೆ ಇದೇ ಕೊಹ್ಲಿ ಟಿವಿಯಲ್ಲಿ ಪೆಪ್ಸಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು ಅವರ ದ್ವಂದ್ವ ನಿಲುವನ್ನು ಸೂಚಿಸುತ್ತದೆ. ಪೆಪ್ಸಿ ಸೇವನೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದೆಂಬುದು ಈಗಾಗಲೇ ತಿಳಿದು ಬಂದಿರುವ ವಿಚಾರವಾಗಿದ್ದು, ಇದನ್ನು ಸೇವಿಸುವವರ ತೂಕ ಹೆಚ್ಚಾಗುವುದಲ್ಲದೆ ಅವರ ಹಲ್ಲೂ ಹುಳುಕು ಬೀಳುವುದೆಂದು ಕೆಲ ಅಧ್ಯಯನಗಳಿಂದ ತಿಳಿದು ಬಂದಿದೆ.
ಹೀಗಿರುವಾಗ ಆರೋಗ್ಯಪೂರ್ಣ ಡಯಟ್ ಸೇವಿಸುವ ಕೊಹ್ಲಿಯವರು ಇಂತಹ ಒಂದು ತಂಪು ಪಾನೀಯದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ಅವರ ದ್ವಂದ್ವ ನಿಲುವನ್ನೇ ಸೂಚಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ, ಕೊಹ್ಲಿಗೆ ಈಗಾಗಲೇ ಫೇಸ್ ಬುಕ್ ನಲ್ಲಿ 3 ಕೋಟಿ ಅಭಿಮಾನಿಗಳಿದ್ದು , ಇನ್‌ಸ್ಟಾಗ್ರಾಂನಲ್ಲಿ 70 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಹೀಗಿರುವಾಗ ಅವರನ್ನೇ ತಮ್ಮ ಮಾದರಿ ಎಂದು ಹಲವಾರು ಮಂದಿ ತಿಳಿದಿರುವಾಗ ಕೊಹ್ಲಿ ಅನಾರೋಗ್ಯಕರ ಪಾನೀಯಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು ಸಮರ್ಥನೀಯವೇ ಎಂದು ಅವರ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.