ಸೆ. 27ರಂದು ಪಡುಬಿದ್ರೆ ಬೀಚ್‌ನಲ್ಲಿ ವಿಶ್ವಪ್ರವಾಸೋದ್ಯಮ ದಿನ

Update: 2016-09-23 12:53 GMT

ಪಡುಬಿದ್ರೆ, ಸೆ.23: ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹಾಗೂ ಕರಾವಳಿ ಪ್ರವಾಸೋದ್ಯಮ ಸಮಿತಿ ಸಹಯೋಗದಲ್ಲಿ ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಪಡುಬಿದ್ರೆ ಬೀಚ್‌ನಲ್ಲಿ ನಡೆಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್ ತಿಳಿಸಿದರು.

ಕಾಪು ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.

ಪ್ರವಾಸೋಧ್ಯಮಕ್ಕೆ ವಿಫುಲ ಅವಕಾಶ

ಉತ್ತಮ ಕರಾವಳಿ ಪ್ರದೇಶವನ್ನು ಹೊಂದಿರುವ ಉಡುಪಿ ಜಿಲ್ಲೆಯ ಪಡುಬಿದ್ರೆ, ಕಾಪು, ಮಲ್ಪೆ, ತ್ರಾಸಿ-ಮರವಂತೆ ಬೀಚ್‌ಗಳ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಾಗಿದೆ. ಒತ್ತಿನೆಣೆ ಬೀಚ್ ನಿರ್ವಹಣೆಯನ್ನು ಖಾಸಗಿ ನಿರ್ವಹಣೆಗೆ ನೀಡಲಾಗುವುದು. ಕರಾವಳಿ ತೀರದ ಬೀಚ್‌ಗಳ ನಿರ್ವಹಣಾ ಉಸ್ತುವಾರಿಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲಾಗಿದೆ ಕಾಪು ಬೀಚ್ ಅನ್ನು ಜ್ಯೋತಿ ಅಡ್ವಟೈಸರ್ಸ್, ಮಲ್ಪೆಹಾಗೂ ತ್ರಾಸಿ-ಮರವಂತೆ ಬೀಚ್ ಅನ್ನು ಉಡುಪಿಯ ಡಯಲ್ ಮಂತ್ರ ಸಂಸ್ಥೆ ನಿರ್ವಹಿಸಲಿದೆ. ಪಡುಬಿದ್ರೆ ಬೀಚ್‌ಅನ್ನು ಐದು ವರ್ಷಗಳ ಅವಧಿಗೆ ಅಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂಗೆ ವಹಿಸಲಾಗಿದೆ. ಬೀಚ್‌ಗಳ ಸ್ವಚ್ಛತೆಗಾಗಿ 75 ಲಕ್ಷ ರೂ. ವೆಚ್ಚದ ಬೀಚ್‌ಕ್ಲೀನ್ ಯಂತ್ರವನ್ನು ಖರೀದಿಸಲಾಗಿದೆ. ಕೇಂದ್ರ ಸರಕಾರದ 1.45 ಕೋಟಿ ರೂ. ಅನುದಾನದಲ್ಲಿ ಪಡುಬಿದ್ರೆ ಬೀಚ್‌ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಬನಾನ ಸ್ಕೇಟಿಂಗ್, ಮೋಟಾರ್ ಬೈಕಿಂಗ್ ಹಾಗೂ ಸರ್ಫಿಂಗ್ ನಡೆಸಲು ಪಡುಬಿದ್ರೆ ಬೀಚ್‌ನಲ್ಲಿ ಜಾಗ ಗುರುತಿಸಲಾಗಿದೆ ಎಂದರು.

ಅಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂ ಅಧ್ಯಕ್ಷ ಮನೋಹರ ಶೆಟ್ಟಿ ಮಾತನಾಡಿ, ವಿದೇಶಿ ನೇರ ಬಂಡವಾಳಕ್ಕೆ ಕೇಂದ್ರ ಸರಕಾರ ಮುಕ್ತ ಅವಕಾಶ ನೀಡಿದ ಹಿನ್ನಲೆಯಲ್ಲಿ ಪ್ರವಾಸೋದ್ಯಮ ಇನ್ನಷ್ಟು ಬೆಳೆಯಲು ಸಹಕಾರಿಯಾಗಿದೆ. ಸುಮಾರು ಮೂರು ಕಿ. ಮೀ. ಉತ್ತಮ ಬೀಚ್ ಹೊಂದಿರುವ ಪಡುಬಿದ್ರೆ ಸಮುದ್ರ ಪ್ರದೇಶ ಹಾಗೂ ಕಾಮಿನಿ ಹೊಳೆಯ ಹಿನ್ನೀರಿನಲ್ಲಿ ಜಲ ಸಾಹಸ ಕ್ರೀಡೆಗಳು ನಡೆಸಲು ಅನುಕೂಲಕರವಾಗಿವೆ. ಎರಡು ಜಿಲ್ಲೆಗಳ ಮಧ್ಯದಲ್ಲಿರುವ ಪಡುಬಿದ್ರೆ ಪ್ರವಾಸೋದ್ಯಮಕ್ಕೆ ಅನುಕೂಲಕರವಾದ ಪ್ರದೇಶವಾಗಿದೆ ಎಂದರು.

ಪುರುಷರು ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ, ಬೈಕ್ ಸ್ಟಂಟ್ ಶೋ, ಇಂಪೋರ್ಟೆಡ್ ಬೈಕ್‌ಗಳ ಪ್ರದರ್ಶನ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಂದಿನ ವರ್ಷದಿಂದ ಇದನ್ನು ಉತ್ಸವಗಳ ರೀತಿಯಲ್ಲಿ ಏಳು ದಿನಗಳ ಕಾಲ ನಡೆಸಲಾಗುವುದು.

ಸೆ.27ರಂದು ಪಡುಬಿದ್ರೆ ಬೀಚ್‌ನಲ್ಲಿ ನಡೆಯುವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಸೆರೆ ಹಿಡಿವ ಬೀಚ್‌ನ ಉತ್ತಮ ಸೆಲ್ಫಿ ಚಿತ್ರಗಳಿಗೆ ಬಹುಮಾನ ನೀಡಲಾಗುವುದು. ಅದಕ್ಕಾಗಿ ಫೇಸ್‌ಬುಕ್ ಖಾತೆ ತೆರೆದು ಅದರಲ್ಲಿ ಚಿತ್ರಗಳನ್ನು ಅಪ್ ಲೋಡ್ ಮಾಡಿ ಹೆಚ್ಚಿನ ಲೈಕ್ ಪಡೆಯುವ ಚಿತ್ರಕ್ಕೆ ಬಹುಮಾನ ನೀಡಲಾಗುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹರ್ಷರಾಜ್ ಶೆಟ್ಟಿ, ಗೌರವ ಶೇಣವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News