ಉಸ್ತುವಾರಿ ಸಚಿವರಿಂದ ಬೇಜವಾಬ್ದಾರಿಯ ಹೇಳಿಕೆ : ಬಿಜೆಪಿ
ಸುಳ್ಯ, ಸೆ.23: ಸುಳ್ಯದಲ್ಲಿ ನಡೆಯುತ್ತಿರುವ ಮತಾಂತರದ ಚಟುವಟಿಕೆಗಳು ಕಪೋಲಕಲ್ಪಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೀಡಿರುವುದನ್ನು ಖಂಡಿಸುವುದಾಗಿ ಬಿಜೆಪಿ ಮಂಡಲ ಸಮಿತಿ ಹೇಳಿದೆ.
ಮಂಡೆಕೋಲಿನ ಸತೀಶ್ ಆಚಾರ್ಯ, ಅರಂಬೂರಿನ ದೀಕ್ಷಿತ್ ಗೌಡ ಮತಾಂತರದ ಬಗ್ಗೆ ಪುರಾವೆಗಳು ದೊರೆತಿದ್ದು, ಸುಳ್ಯದಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬೃಹತ್ ಪ್ರತಿಟನೆ ನಡೆಸಿತ್ತು. ಪಕ್ಷ ಬೇಧ ಮರೆತು ಹಿಂದೂಗಳೆಲ್ಲರೂ ಇದರಲ್ಲಿ ಬಾಗವಹಿಸಿದ್ದರು. ಬಿಜೆಪಿ ಸೇರಿದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರೂ ಇದರಲ್ಲಿ ಭಾಗವಹಿಸಿದ್ದರು. ಇದರಿಂದ ದಿಗಿಲುಗೊಂಡ ಜಿಲ್ಲಾ ಉಸ್ತುವಾರಿ ಸಚಿವರು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳದೆ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದು, ಇದು ಅವರ ಮೂರ್ಖತನದ ಪರಮಾವಧಿ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದರು.
ಮೊನ್ನೆ ನಡೆದ ಪ್ರತಿಭಟನೆ ಮತಾಂತರದ ವಿರುದ್ಧ ಮತ್ತು ಅದನ್ನು ಪ್ರಚೋದಿಸುವವರ ವಿರುದ್ಧವೇ ಹೊರತು ಯಾವುದೇ ಸಮುದಾಯದ ವಿರುದ್ಧವಲ್ಲ. ಆದರೆ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಬಿಜೆಪಿಯವರು ಮುಸ್ಲಿಮರಿಗೆ ಪಕ್ಷದಲ್ಲಿ ಸ್ಥಾನ ನೀಡಿದ್ದನ್ನು ಪ್ರಶ್ನಿಸಿದ್ದು, ಕಾಂಗ್ರೆಸ್‌ನ ನಿಜಬಣ್ಣವನ್ನು ಬಯಲು ಮಾಡಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಶೋಭಾ ನಲ್ಲೂರಾಯ ಹೇಳಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಪಿ.ಜಿ.ಎಸ್.ಎನ್. ಪ್ರಸಾದ್, ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹೆಗ್ಡೆ, ಮುಖಂಡರಾದ ಎನ್.ಎ. ರಾಮಚಂದ್ರ, ಜಯಪ್ರಕಾಶ್ ಕುಂಚಡ್ಕ, ಚನಿಯ ಕಲ್ತಡ್ಕ, ಎಸ್.ಎನ್.ಮನ್ಮಥ, ನವೀನ್ ಕುಮಾರ್ ಮೇನಾಲ, ಸುದರ್ಶನ ಪಾತಿಕಲ್ಲು, ಪಿ.ಕೆ.ಉಮೇಶ್, ಶಾಂತಾರಾಮ ಐವರ್ನಾಡು, ಮಹಿಳಾ ಮೋರ್ಚಾದ ಕಾರ್ಯದರ್ಶಿ ಜಯಂತಿ ಅಜ್ಜಾವರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.