ಪರಮಾಣು ತಂತ್ರಜ್ಞಾನವು ವಿನಾಶಕಾರಿ ಎನ್ನುವುದು ತಪ್ಪುಕಲ್ಪನೆ: ಕೆ.ಸಿ.ಗುಹಾ
ಪುತ್ತೂರು, ಸೆ.23: ಪರಮಾಣು ತಂತ್ರಜ್ಞಾನವು ಆತಂಕಕಾರಿ ಮತ್ತು ವಿನಾಶಕಾರಿ ಎನ್ನುವ ತಪ್ಪುಕಲ್ಪನೆಯು ಜನಮಾನಸದಲ್ಲಿ ಹಾಸು ಹೊಕ್ಕಾಗಿದ್ದು, ಸೂಕ್ತ ತಿಳುವಳಿಕೆಯನ್ನು ನೀಡುವ ಮೂಲಕ ನಾವು ಇದನ್ನು ಹೋಗಲಾಡಿಸಬೇಕು ಎಂದು ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರದ ರೇರ್ ಮೆಟೀರಿಯಲ್ ಪ್ರಾಜೆಕ್ಟ್ ಮೈಸೂರು ಇದರ ಯೋಜನಾ ನಿರ್ದೇಶಕ ಕೆ.ಸಿ.ಗುಹಾ ಹೇಳಿದರು.
ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಮತ್ತು ಮುಂಬೈನ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಕಾಲೇಜಿನಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಪರಮಾಣು ತಂತ್ರಜ್ಞಾನದ ಅನ್ವಯಿಸುವಿಕೆ ಎನ್ನುವ ವಿಷಯದ ಕುರಿತು 3 ದಿನಗಳ ಕಾಲ ನಡೆದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕೈಗಾರಿಕೆ, ಕೃಷಿ, ಔಷಧ, ಆಹಾರ ಮುಂತಾದ ಕ್ಷೇತ್ರದಲ್ಲಿ ಇದು ವ್ಯಾಪಕವಾಗಿ ಬಳಸಲ್ಪಡುತ್ತಿದೆ. ಇದು ಅತ್ಯಂತ ಮಿತವ್ಯಯಕಾರಿಯಾಗಿದೆಯಲ್ಲದೆ ಸೂಕ್ತ ಮುಂಜಾಗರೂಕತೆಯಿಂದ ಇದನ್ನು ಬಳಸಲಾಗುತ್ತದೆ ಎಂದು ಅವರು ತಿಳಿಸಿದರು.
ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಪ್ರೊ.ವಿವೇಕ್ ರಂಜನ್ ಭಂಡಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಡಾ.ಮಹೇಶ್‌ಕೆ.ಕೆ. ಸ್ವಾಗತಿಸಿದರು. ಪ್ರೊ.ವಿನಯ್.ಪಿ ವಂದಿಸಿದರು. ಡಾ.ಪ್ರಸಾದ್ ಎನ್.ಬಾಪಟ್ ನಿರೂಪಿಸಿದರು.
ಮೂರು ದಿನಗಳ ಕಾಲ ನಡೆದ ವಿಚಾರ ಗೋಷ್ಠಿಯಲ್ಲಿ ಭಾರತ ಸರಕಾರದ ಅಣುಶಕ್ತಿ ಇಲಾಖೆಯ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಗಳಾದ ಡಾ. ಆರ್.ಆರ್.ಎಸ್.ಯಾದವ್, ಡಾ.ಕೆ.ಬಿ.ಸೈನಿಸ್, ಡಾ.ಗುರುಶರಣ್ ಸಿಂಗ್, ಡಾ.ಎಸ್.ಎಫ್.ಡಿಸೋಜ, ಡಾ.ಪಿ.ಕೆ.ತಿವಾರಿ, ಪ್ರೊ.ಕೆ.ಟಿ.ಬೇರ, ಡಾ.ಎಚ್.ಎಂ.ಸೋಮಶೇಖರಪ್ಪ, ಕೆ.ಸಿ.ಗುಹಾ ಮತ್ತು ಜೆರಿಶ್.ಎಂ.ಜೋಸ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಅಣುಶಕ್ತಿ-ಹಸಿರುಶಕ್ತಿಯ ಸಂಭಾವ್ಯ ಆಯ್ಕೆ, ಅಯಾನುಗಳ ವಿಕಿರಣ-ಮಾನವ ಆರೋಗ್ಯ ಪ್ರಯೋಜನಗಳು ಮತ್ತು ಕಾಳಜಿ, ರೇಡಿಯೊ ಐಸೋಟೋಪ್‌ಗಳ ಉಪಯೋಗದಿಂದ ಕೈಗಾರಿಕಾ ಉತ್ಪನ್ನಗಳ ಗುಣಮಟ್ಟದ ಹೆಚ್ಚಳ ಮತ್ತು ಆರ್ಥಿಕ ಲಾಭ, ಕೃಷಿ ಮತ್ತು ಆಹಾರದಲ್ಲಿ ವಿಕಿರಣ ತಂತ್ರಜ್ಞಾನದ ಬಳಕೆ, ನೀರಿನಿಂದ ಉಪ್ಪನ್ನು ಬೇರ್ಪಡಿಸುವಿಕೆಯಲ್ಲಿ ಪರಮಾಣು ತಂತ್ರಜ್ಞಾನದ ಉಪಯೋಗ, ಪರಮಾಣು ಶಕ್ತಿ ಮತ್ತು ಇಂಧನ ಚಕ್ರ, ಕರ್ನಾಟಕ ರಾಜ್ಯದ ಸಂಶೋಧನೆ ಮತ್ತು ಅಭಿವೃದ್ದಿಯಲ್ಲಿ ಅಣುಸ್ಥಾವರಗಳ ಪಾತ್ರ, ವೈದ್ಯಕೀಯ ಕ್ಷೇತ್ರದಲ್ಲಿ ಪರಮಾಣು ತಂತ್ರಜ್ಞಾನ ವಿಷಯಗಳ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿದರು.