×
Ad

ಭಾರತಕ್ಕೆ ಕೈಕೊಟ್ಟು 'ಪಾಕ್ ' ರುಚಿ ನೋಡಿದ ರಷ್ಯಾ

Update: 2016-09-23 20:12 IST

ಇಸ್ಲಾಮಾಬಾದ್, ಸೆ. 23: ಪಾಕಿಸ್ತಾನದೊಂದಿಗಿನ ಚೊಚ್ಚಲ ಜಂಟಿ ಸೇನಾ ಅಭ್ಯಾಸದಲ್ಲಿ ಪಾಲ್ಗೊಳ್ಳುವುದಕ್ಕಾಗಿ ರಶ್ಯದ ಪಡೆಗಳು ಶುಕ್ರವಾರ ಪಾಕಿಸ್ತಾನಕ್ಕೆ ಆಗಮಿಸಿವೆ ಎಂದು ಸೇನಾ ವಕ್ತಾರರೊಬ್ಬರು ತಿಳಿಸಿದರು.

ಜಂಟಿ ಸೇನಾಭ್ಯಾಸ ಶನಿವಾರ ಆರಂಭಗೊಳ್ಳಲಿದೆ.

‘‘ಚೊಚ್ಚಲ ಪಾಕ್-ರಶ್ಯ ಜಂಟಿ ಸೇನಾ ಅಭ್ಯಾಸಕ್ಕಾಗಿ ರಶ್ಯದ ಭೂಸೇನಾ ಪಡೆಗಳ ತುಕಡಿಯೊಂದು ಪಾಕಿಸ್ತಾನಕ್ಕೆ ಆಗಮಿಸಿದೆ’’ ಎಂದು ಪಾಕಿಸ್ತಾನದ ಸಶಸ್ತ್ರ ಪಡೆಗಳ ಮಾಧ್ಯಮ ಘಟಕ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್)ನ ಮಹಾ ನಿರ್ದೇಶಕ ಲೆ.ಜ. ಅಸಿಮ್ ಸಲೀಮ್ ಬಜ್ವ ಟ್ವೀಟ್ ಮಾಡಿದ್ದಾರೆ.

ಜಂಟಿ ಸೇನಾ ಅಭ್ಯಾಸದಲ್ಲಿ ರಶ್ಯದ ಸುಮಾರು 200 ಸೈನಿಕರು ಭಾಗವಹಿಸಲಿದ್ದಾರೆ.

ಇದಕ್ಕೂ ಮೊದಲು, ಸೆಪ್ಟಂಬರ್ 18ರಂದು ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿರುವ ಸೇನಾ ನೆಲೆಯೊಂದರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಈ ಜಂಟಿ ಸೇನಾಭ್ಯಾಸ ರದ್ದಾಗಿತ್ತು ಎಂದು ವರದಿಯಾಗಿತ್ತು.

ಉರಿ ದಾಳಿಯಲ್ಲಿ 18 ಸೈನಿಕರು ಹುತಾತ್ಮರಾಗಿದ್ದಾರೆ.

‘ಫ್ರೆಂಡ್‌ಶಿಪ್-2016’ ಎಂಬ ಹೆಸರಿನ ಎರಡು ವಾರಗಳ ಕಾಲ ನಡೆಯುವ ಅಭ್ಯಾಸವು ಮಾಜಿ ಶೀತಲ ಸಮರ ಕಾಲದ ಎದುರಾಳಿಗಳ ಪ್ರಥಮ ಜಂಟಿ ಸಮರಾಭ್ಯಾಸವಾಗಿದೆ.

ಅಕ್ಟೋಬರ್ 7ರವರೆಗೆ ನಡೆಯಲಿರುವ ಜಂಟಿ ಸಮರಾಭ್ಯಾಸದ ಹೆಚ್ಚಿನ ವಿವರಗಳನ್ನು ಉಭಯ ದೇಶಗಳ ಸೇನೆಗಳು ಬಹಿರಂಗಪಡಿಸಿಲ್ಲ. ಆದರೆ, ಅದು ಗುಡ್ಡಗಾಡು ಪ್ರದೇಶಗಳಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

ರಶ್ಯ ಮತ್ತು ಪಾಕಿಸ್ತಾನಗಳು ತಮ್ಮ ಸೇನಾ ಬಾಂಧವ್ಯವನ್ನು ವಿಸ್ತರಿಸುವ ಸೂಚನೆಯನ್ನು ಇದು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News