ಬುಗ್ತಿಗೆ ಆಶ್ರಯ ನೀಡದಂತೆ ಭಾರತಕ್ಕೆ ಪಾಕ್ ಎಚ್ಚರಿಕೆ
ಇಸ್ಲಾಮಾಬಾದ್, ಸೆ. 23: ಬಲೂಚ್ ನಾಯಕ ಬ್ರಹಂಡಾಗ್ ಬುಗ್ತಿಗೆ ಆಶ್ರಯ ನೀಡುವ ಮೂಲಕ ಭಾರತ ‘‘ಭಯೋತ್ಪಾದನೆಯ ಅಧಿಕೃತ ಪ್ರಾಯೋಜಕ’’ನಾಗಲಿದೆ ಎಂದು ಪಾಕಿಸ್ತಾನ ಶುಕ್ರವಾರ ಎಚ್ಚರಿಸಿದೆ.
‘‘ಭಾರತವು ಬುಗ್ತಿಗೆ ಆಶ್ರಯ ನೀಡುವುದು, ದೇಶವೊಂದು ಭಯೋತ್ಪಾದಕನೋರ್ವನಿಗೆ ಆಶ್ರಯ ನೀಡುವುದಕ್ಕೆ ಸಮವಾಗುವುದು. ಹಾಗಾಗಿ, ಭಾರತವು ಭಯೋತ್ಪಾದನೆಯ ಅಧಿಕೃತ ಪ್ರಾಯೋಜಕ ದೇಶವಾಗುವುದು’’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜ ಆಸಿಫ್ ಟ್ವೀಟ್ ಮಾಡಿದ್ದಾರೆ.
ಆಶ್ರಯ ಕೋರಿ ಬುಗ್ತಿ ಸಲ್ಲಿಸಿರುವ ಅರ್ಜಿಯನ್ನು ಭಾರತದ ಗೃಹ ಸಚಿವಾಲಯವು ನಿನ್ನೆ ಸ್ವೀಕರಿಸಿದೆ ಎಂದು ವರದಿಯಾದ ಬಳಿಕ ಆಸಿಫ್‌ರ ಹೇಳಿಕೆ ಹೊರಬಿದ್ದಿದೆ.
ಸ್ವಿಝರ್‌ಲ್ಯಾಂಡ್‌ನಲ್ಲಿ ವಾಸಿಸುತ್ತಿರುವ ಬುಗ್ತಿ ಮಂಗಳವಾರ ಜಿನೇವದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ದೇಶದಲ್ಲಿ ಆಶ್ರಯ ಕೋರುವ ಮನವಿಯನ್ನು ಸಲ್ಲಿಸಿದರು ಹಾಗೂ ಹೊಸದಿಲ್ಲಿಯಿಂದ ಇದಕ್ಕೆ ಧನಾತ್ಮಕ ಪ್ರತಿಕ್ರಿಯೆ ಲಭಿಸುವುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಬುಗ್ತಿ ಬಲೂಚ್ ರಿಪಬ್ಲಿಕನ್ ಪಾರ್ಟಿಯ ಅಧ್ಯಕ್ಷ ಹಾಗೂ ಸ್ಥಾಪಕರಾಗಿದ್ದಾರೆ. ಜಿನೇವದಲ್ಲಿ ರವಿವಾರ ನಡೆದ ಬಲೂಚ್ ರಿಪಬ್ಲಿಕನ್ ಪಾರ್ಟಿಯ ಸಭೆಯೊಂದರಲ್ಲಿ ಆಶ್ರಯ ಕೋರುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
ಬುಗ್ತಿಯ ಅಜ್ಜ ಬಲೂಚ್ ರಾಷ್ಟ್ರೀಯವಾದಿ ನಾಯಕರಾಗಿದ್ದ ನವಾಬ್ ಅಕ್ಬರ್ ಬುಗ್ತಿಯನ್ನು 2006ರಲ್ಲಿ ಪಾಕಿಸ್ತಾನಿ ಸೇನೆ ಕೊಂದಿತ್ತು.
2010ರಲ್ಲಿ ಪಾಕಿಸ್ತಾನದಿಂದ ಜಿನೇವಕ್ಕೆ ಅಫ್ಘಾನಿಸ್ತಾನದ ಮೂಲಕ ಪಲಾಯನ ಮಾಡಲು ಬುಗ್ತಿಗೆ ಭಾರತ ನೆರವು ನೀಡಿದೆ ಎಂದು ಪಾಕಿಸ್ತಾನ ಆರೋಪಿಸಿದೆ.