×
Ad

ಕೇಂದ್ರ ಕೃಷಿ ಸಚಿವರನ್ನು ಭೇಟಿಯಾದ ಪ್ರಮೋದ್

Update: 2016-09-23 21:23 IST

ಉಡುಪಿ, ಸೆ.23: ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ, ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಗುರುವಾರ ಹೊಸದಿಲ್ಲಿಯಲ್ಲಿ ಕೇಂದ್ರ ಕೃಷಿ ಮತ್ತು ಕೃಷಿಕರ ಕಲ್ಯಾಣ ಸಚಿವ ರಾಧಾ ಮೋಹನ್‌ಸಿಂಗ್ ಅವರನ್ನು ಕೃಷಿ ಭವನದಲ್ಲಿ ಭೇಟಿಯಾಗಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಅವರು, ಕರ್ನಾಟಕ ರಾಜ್ಯದಲ್ಲಿರುವ ಮೀನುಗಾರಿಕಾ ಬಂದರುಗಳ ವಿವಿಧ ಯೋಜನೆಗಳಿಗೆ ಕೇಂದ್ರ ಸರಕಾರದ ಪಾಲಿನ ಬಾಕಿ ಉಳಿದಿರುವ ಅನುದಾನವನ್ನು ಮಂಜೂರುಗೊಳಿಸುವಂತೆ ವಿನಂತಿಸಿದರು.

ಅಲ್ಲದೇ ಇಡೀ ದೇಶದಲ್ಲಿ ಕಡಲ ಮೀನುಗಾರಿಕೆಯ ಸುಸ್ಥಿರ ಅಭಿವೃದ್ಧಿಗೆ ಏಕರೂಪದ ನೀತಿನಿಯಮಗಳನ್ನು ರೂಪಿಸಲು ಅನುಕೂಲವಾಗುವಂತೆ ಕರಾವಳಿ ತೀರವನ್ನು ಹೊಂದಿರುವ ರಾಜ್ಯಗಳ ಮೀನುಗಾರಿಕಾ ಸಚಿವರುಗಳ ಸಭೆಯೊಂದನ್ನು ಇದೇ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಆಯೋಜಿಸುವಂತೆಯೂ ಪ್ರಮೋದ್ ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.

ಅಲ್ಲದೇ ಮೀನುಗಾರಿಕಾ ಮೂಲಭೂತ ಸೌಲಭ್ಯಗಳ ಯೋಜನೆಗೆ ಈ ಹಿಂದೆ ಇದ್ದ ಕೇಂದ್ರದ ನೆರವಿನ 75:25ರ ಪ್ರಮಾಣವನ್ನು ಉಳಿಸಿ ಕೊಳ್ಳುವಂತೆಯೂ ಅವರು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ಸಿಂಗ್‌ರಲ್ಲಿ ವಿಶೇಷ ಮನವಿ ಮಾಡಿದರು.

ಈ ಬಗ್ಗೆ ಪ್ರತಿ ವಿಷಯವನ್ನು ಪರಿಶೀಲಿಸಿ ಅತಿಶೀಘ್ರವೇ ಪೂರಕ ಕ್ರಮಗಳನ್ನು ಕೈಗೊಳ್ಳುವುದಾಗಿ ಕೇಂದ್ರ ಸಚಿವರು ಪ್ರಮೋದ್ ಮಧ್ವರಾಜ್‌ಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ಹಿರಿಯ ಅಧಿಕಾರಿಗಳಾದ ದೇವೇಂದ್ರ ಚೌಧುರಿ, ರಾಜ್ಯ ಸರಕಾರದ ಪರವಾಗಿ ಎಸ್.ಆರ್.ಉಮಾಶಂಕರ್, ಎಚ್.ಎಸ್.ವೀರಪ್ಪ ಗೌಡ, ಡಾ.ಸಿ.ಕೆ.ಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News