×
Ad

ಅಂಗರಗುಡ್ಡೆ ವಿವಾದ ತಾರಕಕ್ಕೆ: ಇತ್ತಂಡಗಳ ಹೊಡೆದಾಟ

Update: 2016-09-23 22:07 IST

ಮುಲ್ಕಿ, ಸೆ.23: ಗುರುಗಳ ನೇಮಕ ವಿವಾದಕ್ಕೆ ಸಂಬಂಧಿಸಿದಂತೆ ಅಂಗರಗುಡ್ಡೆ ಬದ್ರಿಯಾ ಜುಮಾ ಮಸೀದಿಯ ಎರಡು ಬಣಗಳ ನಡುವಿನ ವಿವಾದ ತಾರಕಕ್ಕೇರಿದ್ದು ಗುರುವಾರ ರಾತ್ರಿಯ ಹೊಡೆದಾಟಕ್ಕೆ ಪೂರಕವಾಗಿ ಶುಕ್ರವಾರ ಬೆಳಗ್ಗೆ ಮತ್ತೆ ಎರಡು ಬಣಗಳ ನಡುವೆ ಘರ್ಷಣೆ ಸಂಭವಿಸಿ ಇತ್ತಂಡಗಳ ಐವರು ಮುಲ್ಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗುರುವಾರ ರಾತ್ರಿ ಮಸೀದಿಯ ಖತೀಬರಾದ ಅಲ್ ಹಾದಿ ಅಸೈಯದ್ ಇಬ್ರಾಹೀಂ ತಂಙಳ್ ನಮಾಝ್ ಮುಗಿಸಿ ಪ್ರವಚನ ಮಾಡುತ್ತಿದ್ದಾಗ ವಿರೋಧಿ ಬಣ ಏಕಾಏಕಿ ಮಸೀದಿಗೆ ನುಗ್ಗಿ ದಾಂಧಲೆ ನಡೆಸಿ ಖತೀಬರಿಗೆ ಹಾಗೂ ತಡೆಯಲು ಬಂದ ಜಮಾಅತಿನ ಸದಸ್ಯ ಮುಸ್ತಫಾ ಎಂಬವರಿಗೆ ಹಲ್ಲೆ ನಡೆಸಿ ಪರಾರಿಯಾಗಿರುವುದಾಗಿ ಪ್ರಕರಣ ದಾಖಲಾಗಿತ್ತು.

ಘಟನೆ ಬಳಿಕ ಶುಕ್ರವಾರ ಬೆಳಗ್ಗೆ ಸ್ಥಳೀಯ ನಿವಾಸಿ ಶಿಹಾಬ್(18) ಎಂಬಾತ ಮನೆಯಿಂದ ಕಾಲೇಜಿಗೆ ತೆರಳುತ್ತಿದ್ದ ವೇಳೆ ಅಂಗರಗುಡ್ಡೆ ಮಸೀದಿಯ ಬಳಿ ಕೆಲವರು ಖತೀಬರ ಕೊಠಡಿಯ ಬಾಗಿಲು ಒಡೆಯಲು ಮಾರಕಾಯುಧಗಳಿಂದ ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. ಇದನ್ನು ನೋಡಿದ ಶಿಹಾಬ್‌ಗೆ ಆರೋಪಿಗಳಾದ ಅಹ್ಮದ್ ಬಾವಾ, ಅಬ್ದುಲ್ ಖಾದರ್, ಝುಬೇರ್, ಅಬೂಬಕರ್, ಮುಹಮ್ಮದ್ ಹನೀಫ್, ಶಂಸು, ಸಿದ್ದೀಕ್, ಮುಹಮ್ಮದ್ ಸಾಝ್ ಮತ್ತಿತರರು ಸೇರಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಶಿಹಾಬ್ ಮುಲ್ಕಿ ಆಸ್ಪತ್ರೆಗೆ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಬೆಳಗ್ಗೆ ಸ್ಥಳೀಯ ನಿವಾಸಿಗಳಾದ ಅಹ್ಮದ್ ಬಾವ(55),ನವಾಝ್(21), ಝುಬೇರ್(40), ಅಬ್ದುಲ್ ಖಾದರ್(48) ಎಂಬವರು ಅಂಗರಗುಡ್ಡೆ ಮಸೀದಿಗೆ ನಮಾಝ್ ಮಾಡಲೆಂದು ತೆರಳುತ್ತಿದ್ದಾಗ ಹುಸೈನ್, ಆಶೀಕ್, ಇರ್ಷಾದ್, ನಿಸಾರ್, ಇಕ್ಬಾಲ್, ಅಝೀಝ್, ಹಮೀದ್, ಶಿಹಾಬ್, ಮುಹಮ್ಮದ್ ಶರೀಫ್, ಸದ್ದಾಂ. ಆಸೀಫ್, ರಝಾಕ್, ಸತ್ತಾರ್ , ಐಡಿಯಲ್ ಇಮ್ತಿಯಾಝ್ ಮತ್ತಿತರರು ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಗೊಳಗಾದವರು ಮುಲ್ಕಿ ಆಸ್ಪತ್ರೆಗೆ ದಾಖಲಾಗಿದ್ದು ಇತ್ತಂಡಗಳ ವಿರುದ್ಧ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶುಕ್ರವಾರದ ವಿಶೇಷ ನಮಾಝ್ ಮುಲ್ಕಿ ಪೊಲೀಸರು ಬಿಗಿ ಭದ್ರತೆಯೊಂದಿಗೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News