ಲಾಲು ಪುತ್ರ-ಶಹಾಬುದ್ದೀನ್‌ಗೆ ಸುಪ್ರೀಂಕೋರ್ಟ್ ನೋಟಿಸ್
ಹೊಸದಿಲ್ಲಿ, ಸೆ.23: ಸಿವಾನ್‌ನ ಪತ್ರಕರ್ತ ರಾಜದೇವ್ ರಂಜನ್ ಹತ್ಯೆ ಪ್ರಕರಣದ ಸಂಬಂಧ ಶುಕ್ರವಾರ ಸುಪ್ರೀಂ ಕೋರ್ಟ್ ಆರ್‌ಜೆಡಿ ನಾಯಕ ಶಹಾಬುದ್ದೀನ್, ಬಿಹಾರದ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಹಾಗೂ ಬಿಹಾರ ಸರಕಾರಕ್ಕೆ ನೋಟಿಸ್‌ಗಳನ್ನು ಜಾರಿ ಮಾಡಿದೆ.
ಪತ್ರಕರ್ತನ ಕೊಲೆ ಪ್ರಕರಣದ ತನಿಖೆಯನ್ನು ಮುಂದುವರಿಸುವಂತೆ ಸಿಬಿಐಗೆ ಆದೇಶ ನೀಡಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ, ರಂಜನ್‌ರ ಪತ್ನಿ ಆಶಾ ರಂಜನ್ ಮತ್ತವರ ಕುಟುಂಬದವರಿಗೆ ಭದ್ರತೆ ಒದಗಿಸುವಂತೆ ಬಿಹಾರ ಪೊಲೀಸರಿಗೆ ನಿರ್ದೇಶನ ನೀಡಿದೆ.
ಮುಂದಿನ ವಿಚಾರಣಾ ದಿನಾಂಕವಾದ ಅ.17ರಂದು ಸ್ಥಿತಿಗತಿ ವರದಿಯೊಂದನ್ನು ಮಂಡಿಸುವಂತೆ ಅದು ಸಿಬಿಐಗೆ ಸೂಚಿಸಿದೆ.
ತನ್ನ ಪತಿಯ, ತಲೆ ಮರೆಸಿಕೊಂಡಿರುವ ಹತ್ಯಾರೋಪಿಗಳಿಬ್ಬರು, ಶಹಾಬುದ್ದೀನ್ ಹಾಗೂ ತೇಜಪ್ರತಾಪ್ ಯಾದವ್‌ರೊಂದಿಗಿದ್ದಾರೆಂದು ಮಾಧ್ಯಮ ವರದಿಗಳು ಹೇಳಿವೆ. ಅದರಿಂದಾಗಿ ತನಿಖೆ ಹಾಗೂ ವಿಚಾರಣೆಯನ್ನು ದಿಲ್ಲಿಗೆ ವರ್ಗಾಯಿಸಬೇಕೆಂದು ಆಶಾ, ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಶಹಾಬುದ್ದೀನ್, ರಂಜನ್ ಕೊಲೆಯ ಪಿತೂರಿಗಾರನಾಗಿದ್ದಾರೆ. ಕೊಲೆ ಪ್ರಕರಣವೊಂದರ ಸಂಬಂಧ ರಂಜನ್ ನೀಡಿದ್ದ ವರದಿಗಳಿಂದ ಅವರು, ಸಿಡಿಮಿಡಿಗೊಂಡಿದ್ದರು. ಶಹಾಬುದ್ದೀನ್‌ರ ಅಪರಾಧ ಸಾಬೀತಾಗಿ ಜೀವಾವಧಿ ಶಿಕ್ಷೆಯೂ ಆಗಿತ್ತೆಂದು ಮನವಿಯಲ್ಲಿ ಹೇಳಲಾಗಿತ್ತು.