ಕಲ್ಲಂಗಳ ಪ್ರೌಢ ಶಾಲೆಯಲ್ಲಿ ಲಯನ್ಸ್ ಮಾಸಾಚರಣೆ
ವಿಟ್ಲ, ಸೆ.23: ಕಲ್ಲಂಗಳ ಕೇಪು ಸರಕಾರಿ ಪ್ರೌಢ ಶಾಲೆಯಲ್ಲಿ ವಿಟ್ಲ ಲಯನ್ಸ್ ಮತ್ತು ಲಯನೆಸ್ ಕ್ಲಬ್‌ಗಳ ಮಾಸಾಚರಣೆ ಅಂಗವಾಗಿ ಏಡ್ಸ್ ಮತ್ತು ಮಧುಮೇಹ ಕಾಯಿಲೆಗಳ ಬಗ್ಗೆ ವಿಟ್ಲ ಸುರಕ್ಷಾ ಹೆಲ್ತ್ ಸೆಂಟರ್‌ನ ಸ್ತ್ರೀ ರೋಗ ತಜ್ಞರಾದ ಗೀತ ಪ್ರಕಾಶ್ ಅಂಗರಕೋಡಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ರೋಗ ಲಕ್ಷಣಗಳು, ರೋಗಕ್ಕೆ ಕಾರಣವಾದ ಅಂಶಗಳು, ನಿಯಂತ್ರಣೋಪಾಯಗಳು ಹಾಗೂ ವಹಿಸ ಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅವರು ತಿಳಿ ಹೇಳಿದರು.
ಕೇಪು ಕಲ್ಲಂಗಳ ಪ್ರೌಢ ಶಾಲಾ ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ರಮೇಶ ಎಂ. ಬಾಯಾರ್ ಅಧ್ಯಕ್ಷತೆ ವಹಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ ಪಡಿಯಾರ್, ಶೇಕಡಾ ನೂರರ ಗುಣ ಮಟ್ಟದ ಫಲಿತಾಂಶಕ್ಕೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ವಿಟ್ಲ ಲಯನ್ಸ್ ಕ್ಲಬ್‌ನ ಹಿರಿಯ ಸದಸ್ಯರಾದ ಚಿತ್ರನಟ ಮಂಗೇಶ ಭಟ್ ಮಾತನಾಡಿ ವಿದ್ಯಾರ್ಥಿಗಳು ಗುಣಗ್ರಾಹಿಗಳಾಗಿ ಬೆಳೆದು ಸಮಾಜದಿಂದ ಗೌರವಾದರಗಳನ್ನು ಪಡೆಯಬೇಕೆಂದರು. ಲಯನ್ಸ್ ವಲಯಾಧ್ಯಕ್ಷ ಸತೀಶ ಆಳ್ವ ಇರಾ ಅವರು ಶುಭಹಾರೈಸಿ ಶಾಲೆಗೆ ಎಲ್‌ಸಿಡಿ ಪ್ರಾಜೆಕ್ಟರ್ ಖರೀದಿಗೆ ಆರ್ಥಿಕ ನೆರವೀಯುವುದಾಗಿ ಭರವಸೆ ನೀಡಿದರು.
ಮುಹಮ್ಮದ್ ಇಕ್ಬಾಲ್ ಸಾಮಾಜಿಕ ಮತ್ತು ಕೌಟುಂಬಿಕ ಶಾಂತಿ ಸಾಮರಸ್ಯಗಳನ್ನುಳಿಸುವಲ್ಲಿ ವಿದ್ಯಾರ್ಥಿಗಳು ತಮ್ಮದೇ ಆದ ಕೊಡುಗೆಗಳನ್ನು ನೀಡಲು ಕರೆ ನೀಡಿದರು. ವಿಟ್ಲ ಲಯನೆಸ್ ಅಧ್ಯಕ್ಷೆ ಲೀನಾ ರಾಡ್ರಿಗಸ್, ಶಿಕ್ಷಕ ಲಿಂಗಪ್ಪನಾಯ್ಕಿ ಎ., ಗೌರಿದೇವಿ ಮತ್ತು ಗೀತಾ ಎನ್. ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಲಕ್ಷ್ಮಣ ಟಿ. ನಾಯಕ್ ಸ್ವಾಗತಿಸಿದರು. ರಮೇಶ ಡಿ. ನಿರೂಪಿಸಿದರು. ಕೆ.ಜಿ. ಸುಬ್ರಹ್ಮಣ್ಯ ಭಟ್ ವಂದಿಸಿದರು.