ಕಾವೇರಿ ಜಲ ವಿವಾದ: ವಿಧಾನ ಮಂಡಲದ ನಿರ್ಣಯಕ್ಕೆ ಜನಾರ್ದನ ಪೂಜಾರಿ ಏನ್ಹೇಳ್ತಾರೆ ಕೇಳಿ!
ಮಂಗಳೂರು, ಸೆ. 24: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿ ಕರ್ನಾಟಕದ ಉಭಯ ಸದನಗಳಲ್ಲಿ ಕೈಗೊಳ್ಳಲಾದ ನಿರ್ಣಯ ದೇಶಕ್ಕೆ ಮಾದರಿಯಾಗಿದೆ. ಆದರೆ ಈ ಹೆಜ್ಜೆ ನ್ಯಾಯಾಂಗ ನಿಂದನೆಯಾಗಿರುವ ಮೂಲಕ ರಾಜ್ಯದಲ್ಲಿ ವಿಷಮ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅಭಿಪ್ರಾಯಿಸಿದ್ದಾರೆ. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ಗೆ ಅಫಿದಾವಿತ್ ಸಲ್ಲಿಸುವಾಗಲೇ ಗಂಭೀರವಾಗಿ ಪರಿಗಣಿಸದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರನ್ನು ತರಾಟೆಗೈದರು.
ಕಾವೇರಿ ವಿಷಯದಲ್ಲಿ ಇಡೀ ಕರ್ನಾಟಕವನ್ನು ಹಿರಿಯ ವಕೀಲರಾದ ನಾರಿಮನ್‌ರವರಿಗೆ ಅಡವಿಟ್ಟಿದ್ದೀರಾ? ರಾಜ್ಯದಲ್ಲಿ ಸೂಕ್ತ ಇಂಜಿನಿಯರ್‌ಗಳು, ತಜ್ಞರು, ವಾದ ಮಾಡುವವರು ಇಲ್ಲವೇ ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪ್ರಶ್ನಿಸಿದರು. ಮುಖ್ಯಮಂತ್ರಿಯವರ ವಿರುದ್ಧ ದ್ವೇಷದಿಂದ ಅವರನ್ನು ದುರ್ಬಲರನ್ನಾಗಿಸಲು ಈ ಮಾತುಗಳನ್ನು ನಾನು ಹೇಳುತ್ತಿಲ್ಲ. ನೀವು ಈ ಹಿಂದೆ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದೀರಿ. ಆದರೆ ಈ ವಿಷಯದಲ್ಲಿ ನೀವು ದುರ್ಬಲರಾಗಿಬಿಟ್ಟಿರಿ. ಉಭಯ ಸದನದಲ್ಲಿ ಕೈಗೊಂಡ ಧೈರ್ಯವನ್ನು ನಾನು ಮೆಚ್ಚುತ್ತೇನೆ. ಆದರೆ ಇದೊಂದು ಹುಚ್ಚು ಧೈರ್ಯ ಎಂದು ಅವರು ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯವರು ಏನು ಮಾಡಬಹುದಿತ್ತು ಎಂಬ ಸುದ್ದಿಗಾರರ ಪ್ರಶ್ನೆಗೆ, ನಿನ್ನೆ ಉಭಯ ಸದನಗಳಲ್ಲಿ ಸರ್ವ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದಂತೆ ಎಲ್ಲರೂ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದರೆ ಸಂವಿಧಾನ ಬಿಕ್ಕಟ್ಟು ಸೃಷ್ಟಿಯಾಗುತ್ತಿತ್ತು. ಆ ಸಂದರ್ಭ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಬಹುದಾಗಿತ್ತು ಎಂದು ಪ್ರತಿಕ್ರಿಯಿಸಿದರು. ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹರಿಹಾಯ್ದ ಜನಾರ್ದನ ಪೂಜಾರಿ, ಎರಡು ರಾಜ್ಯಗಳು ಜಗಳ ಮಾಡುತ್ತಿರುವಾಗ ಅದನ್ನು ಬಗೆಹರಿಸಬೇಕಾದುದು ಪ್ರಧಾನಿ ಜವಾಬ್ದಾರಿ ಅಲ್ಲವೇ ಎಂದು ಪ್ರಶ್ನಿಸಿದರು.