ಮಂಗಳೂರು ದಸರಾಕ್ಕೆ ಸರಕಾರ ಕೊಟ್ಟರೂ ನೆರವು ಪಡೆಯುವುದಿಲ್ಲ!
ಮಂಗಳೂರು, ಸೆ.24: ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಪ್ರತಿ ವರ್ಷದಂತೆ ನಡೆಯಲಿರುವ ಮಂಗಳೂರು ದಸರಾಕ್ಕೆ ಸಿದ್ಧತೆಗಳು ಆರಂಭಗೊಂಡಿವೆ.
ಕ್ಷೇತ್ರದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಂಗಳೂರು ದಸರಾ ಬಗ್ಗೆ ಕ್ಷೇತ್ರದ ನವೀಕರಣದ ರುವಾರಿ ಜನಾರ್ದನ ಪೂಜಾರಿ ಮಾಹಿತಿ ನೀಡಿದರು.
ಮಂಗಳೂರು ದಸರಾದ ಅಂಗವಾಗಿ ಅಕ್ಟೋಬರ್ 1ರಂದು ಬೆಳಗ್ಗೆ 11.15 ಗಂಟೆಗೆ ಗೋಕರ್ಣನಾಥ ಕ್ಷೇತ್ರದಲ್ಲಿ ಶಾರದಾ ಮಾತೆಯ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆ ನೆರವೇರಲಿದೆ. ಅಕ್ಟೋಬರ್ 9ರಂದು 10 ಗಂಟೆಗೆ ಚಂಡಿಕಾ ಹೋಮ, ಹಗಲೋತ್ಸವ ನಡೆಯಲಿದೆ. ಕ್ಷೇತ್ರಕ್ಕೆ ಬರುವ ಶಾಲಾ ಮಕ್ಕಳು ಮತ್ತು ಭಕ್ತರಿಗೆ ನಿತ್ಯ ಅನ್ನ ಸಂತರ್ಪಣೆ ನಡೆಯಲಿದೆ. ಅ. 10ರಂದು ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಮಹಾ ಅನ್ನ ಸಂತರ್ಪಣೆ, ನಡೆದು, ಅ. 11ರಂದು ಕ್ಷೇತ್ರದ ಆವರಣದಿಂದ ಸಂಜೆ 4 ಗಂಟೆಗೆ ‘ಮಂಗಳೂರು ದಸರಾ ಮೆರವಣಿಗೆ’ ಹೊರಡಲಿದೆ ಎಂದು ಅವರು ಹೇಳಿದರು.
ಸರಕಾರದ ನೆರವು ಪಡೆಯುವುದಿಲ್ಲ!
ಮಂಗಳೂರು ದಸರ ಕಾರ್ಯಕ್ರಮಕ್ಕೆ ಈವರೆಗೆ ಸರಕಾರದಿಂದ ಒಂದು ನಯಾ ಪೈಸೆಯನ್ನೂ ಪಡೆಯಲಾಗಿಲ್ಲ. ನನ್ನನ್ನೂ ಸೇರಿಸಿ ಸಂಸದ ನಿಧಿಯಾಗಿ, ಶಾಸಕರ ನಿಧಿಯಾಗಲಿ ಕ್ಷೇತ್ರಕ್ಕಾಗಿ ಬಳಕೆ ಮಾಡಲಾಗಿಲ್ಲ. ಸರಕಾರ ಕೊಡುವುದಾಗಿ ಹೇಳಿದರೂ ಪಡೆಯುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಜನಾರ್ದನ ಪೂಜಾರಿ ಪ್ರತಿಕ್ರಿಯಿಸಿದರು.
ಮಂಗಳೂರು ದಸರಾಕ್ಕೆ ಜನಶಕ್ತಿಯೇ ಬೆಂಬಲ
ಮಂಗಳೂರು ದಸರಾವನ್ನು ಕಳೆದ 25 ವರ್ಷಗಳಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಇದಕ್ಕೆ ಜನಶಕ್ತಿಯ ಬೆಂಬಲವೇ ಕಾರಣ ಎಂದು ಜನಾರ್ದನ ಪೂಜಾರಿ ಹೇಳಿದರು.
ಶೋಭಾ ಯಾತ್ರೆಯಲ್ಲಿ ಶಾರದಾ ಮಾತೆ, ಮಹಾಗಣಪತಿ, ನವದುರ್ಗೆಯರ ಸಹಿತ ರಾಜ್ಯದ ವಿವಿಧ ಕಡೆಗಳಿಂದ 75ಕ್ಕೂ ಅಧಿಕ ಸ್ತಬ್ಧ ಚಿತ್ರಗಳು ಭಾಗವಹಿಸಲಿವೆ. ಯಾತ್ರೆಯು ಕಂಬಳ ರಸ್ತೆಯಾಗಿ ಲೇಡಿಹಿಲ್, ಲಾಲ್‌ಬಾಗ್, ಬಲ್ಲಾಳ್‌ಬಾಗ್, ಕೊಡಿಯಾಲ್‌ಬೈಲ್, ಹಂಪನಕಟ್ಟೆ, ವಿವಿ ಕಾಲೇಜು, ಗಣಪತಿ ಹೈಸ್ಕೂಲ್, ಕಾರ್‌ಸ್ಟ್ರೀಟ್, ಚಿತ್ರಾ ಟಾಕಿಸ್ ಅಳಕೆ ಮಾರ್ಗವಾಗಿ ಅ. 12ರಂದು ಬೆಳಗ್ಗಿನ ಜಾವ ಕ್ಷೇತ್ರಕ್ಕೆ ಹಿಂತಿರುಗಲಿದೆ. ಮಂಗಳೂರು ದಸರಾ ಸಂದರ್ಭ ಕ್ಷೇತ್ರದ ಸಂತೋಷಿ ಕಲಾ ಮಂಟಪದಲ್ಲಿ ವಿವಿಧ ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ಕ್ಷೇತ್ರದ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ತಿಳಿಸಿದರು.
ಗೋಕರ್ಣ ಕ್ಷೇತ್ರ ಸ್ವಾಧೀನದ ಕ್ರಮ ಕೀಳು ಮಟ್ಟದ ರಾಜಕೀಯ!
ರಾಮಚಂದ್ರಾಪುರ ಮಠದ ಸ್ವಾಧೀನಕ್ಕೊಳಪಟ್ಟ ಗೋಕರ್ಣಕ್ಷೇತ್ರವನ್ನು ಸ್ವಾಧೀನಕ್ಕೆ ಪಡೆಯುವ ಸರಕಾರದ ಕ್ರಮ ಕೀಳು ಮಟ್ಟದ ರಾಜಕೀಯ ಎಂದು ಜನಾರ್ದನ ಪೂಜಾರಿ ಪ್ರತಿಕ್ರಿಯಿಸಿದರು.