ಅ.15-16: ಸವಣೂರಿನಲ್ಲಿ ರಾಜ್ಯ ಮಟ್ಟದ ಜಾನಪದ ಉತ್ಸವ

Update: 2016-09-24 12:05 GMT

 ಪುತ್ತೂರು,ಸೆ.24: ಸವಣೂರಿನ ವಿಧ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಅ.15 ಮತ್ತು 16ರಂದು 2 ದಿನಗಳ ರಾಜ್ಯ ಮಟ್ಟದ ‘ಕಲಾರಶ್ಮಿ’ ಜಾನಪದ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ಅವರು ತಿಳಿಸಿದ್ದಾರೆ.

ಉತ್ಸವವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಚಿನ್ನಪ್ಪ ಗೌಡ ಉದ್ಘಾಟಿಸಲಿದ್ದಾರೆ. ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ಧನ್ ಧ್ವಜಾರೋಹಣ ನಡೆಸಲಿದ್ದಾರೆ. ಅರಣ್ಯ ಸಚಿವ ಬಿ. ರಮಾನಾಥ ರೈ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕ ದಯಾನಂದ್, ಪುತ್ತೂರು ಉಪವಿಭಾಗಾಧಿಕಾರಿ ಡಾ. ರಾಜೇಂದ್ರ ಕೆ.ವಿ. ವಿವಿಧ ಅಕಾಡಮಿಗಳ ಅಧ್ಯಕ್ಷರು ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಅಂಗಾರ ವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಕೆ. ಬೈರಪ್ಪ ಸಮಾರೋಪ ಭಾಷಣ ಮಾಡಲಿದ್ದಾರೆ. ಜರ್ಮನ್ ಯುನಿವರ್ಸಿಟಿಯ ಅತಿಥಿ ಉಪನ್ಯಾಸಕ ಪ್ರೊ.ಬಿ.ಎ.ವಿವೇಕ್ ರೈ ಸನ್ಮಾನ ನಡೆಸಲಿದ್ದಾರೆ. ಸಚಿವ ಯು.ಟಿ.ಖಾದರ್ ಪ್ರಶಂಸ ಪತ್ರ ವಿತರಣೆ ಮಾಡಲಿದ್ದಾರೆ. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಮತ್ತಿತರರು ಅತಿಥಿಯಾಗಿ ಭಾಗವಹಿಸಲಿದ್ದಾರೆ.

 ಈ ಸಂದರ್ಭದಲ್ಲಿ ಜಾನಪದ ಕಲಾವಿದರು ಹಾಗೂ ವಿದ್ವಾಂಸರಾದ ಶುಭಾನಂದ ಶಿವಬಾಸು ಮಾಧಭವಿ ಬೆಳಗಾವಿ(ಭಜನೆ), ಶರಣಪ್ಪ ಗೊನೆಲ ಕಲ್ಬುಗಿ(ತತ್ವಪದ), ಕೆಬ್ಬೆಪುರ ಸಿದ್ದರಾಜು ಮೈಸೂರು(ನೀಲಾಗರ ಮೇಳ), ತಿಮ್ಮರಾಯಪ್ಪ ಬೆಂಗಳೂರು(ತಮಟೆ), ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್(ಹಿರಿಯ ಜಾನಪದ ವಿದ್ವಾಂಸ) ಮತ್ತು ಕರ್ಗಿ ಶೆಡ್ತಿ(ಪಾಡ್ದನ) ಇವರನ್ನು ಸನ್ಮಾನಿಸಲಾಗುವುದು.

ಜಾನಪದ ಉತ್ಸವದಲ್ಲಿ ಹುಲಿ ಕುಣಿತ, ದುಡಿ ಕುಣಿತ, ಕರಂಗೋಲು, ಕಂಗೀಲು, ಉಮ್ಮತಾಟ್, ಬೊಳ್‌ಕಾಟ್, ಸಿದ್ದವೇಷ, ಅರೆಭಾಷೆ ಸಾಂಸ್ಕೃತಿಕ ಸೌರಭ, ಪಣಿಯಮ್ಮ ಮಹಿಳಾ ಡೊಳ್ಳು ಕುಣಿತ, ಪೂಜಾ ಕುಣಿತ, ಯಕ್ಷಗಾನ, ಗುಮ್ಟೆ ಕುಣಿತ, ದಫ್ ಪ್ರದರ್ಶನ, ಕನ್ಯಾಪು, ಕಂಸಾಳೆ, ಜೋಗತಿ ಕುಣಿತ, ಪಂಚವಾದ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News