ಗುರಿಪಳ್ಳ ಎಣೀರುಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ
ಬೆಳ್ತಂಗಡಿ,ಸೆ.24: ಗುರಿಪಳ್ಳ ಎಣೀರುಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೆಳ್ತಂಗಡಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯವರಾದ ಸಿಸ್ಟರ್ ಅಮ್ಮಿ ಅವರು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡುತ್ತಾ "ಯಾವುದೇ ಒಂದು ಯಂತ್ರವು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾದರೆ ಅದಕ್ಕೆ ಸರಿಯಾದ ಪ್ರಮಾಣದ ಇಂಧನಗಳು ಅವಶ್ಯಕವಾಗಿರುತ್ತದೆ, ಅದೇ ರೀತಿಯಾಗಿ ದೇಹದ ಪ್ರತಿಯೊಂದು ಭಾಗವು ಸರಿಯಾದ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಬೇಕಿದ್ದರೆ ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪೌಷ್ಟಿಕ ಸತ್ವಪೂರ್ಣ ಆಹಾರಗಳನ್ನು ನಾವು ಸೇವಿಸಬೇಕು. ಇಲ್ಲವಾದಲ್ಲಿ ದೇಹವು ದುರ್ಬಲವಾಗುವುದು. ಹದಿ ಹರೆಯದ ಸಮಯಗಳಲ್ಲಿ ಮತ್ತು ಗರ್ಭಿಣಿ ಸ್ತ್ರೀಯರು ತಮ್ಮ ಬಗ್ಗೆ ವಿಶೇಷವಾದ ಕಾಳಜಿಯನ್ನು ಹೊಂದಿರಬೇಕು ಇಲ್ಲವಾದಲ್ಲಿ ಅಪೌಷ್ಟಿಕತೆಯಿಂದ ಬಳಲಬೇಕಾದಂತಹ ಸನ್ನಿವೇಶಗಳು ಎದುರಾಗಬಹುದಾಗಿದೆ" ಎಂದು ತಿಳಿಸಿದರು.
ಮಕ್ಕಳ ಪೋಷಕರು ಪೌಷ್ಟಿಕಾಂಶಯುಕ್ತ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿದ್ದರು ಮತ್ತು ಪರಸ್ಪರ ಹಂಚಿದರು. ಕಾರ್ಯಕ್ರಮದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾದಶಾಂಭ, ವಲಯದ ಆಶಾ ಕಾರ್ಯಕರ್ತರಾದ ಶಶಿಕಲ, ಅಂಗನವಾಡಿ ಕಾರ್ಯಕರ್ತರಾದ ಲಲಿತ,ಸಹಾಯಕಿಯಾದ ಸುಧಾ, ವಿಮುಕ್ತಿ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ಸುನಿಲ್, ಮತ್ತು ಕಾರ್ಯಕರ್ತರಾದ ಅನುರಾಧ ರವರು ಉಪಸ್ಥಿತರಿದ್ದರು.