ಬಂಟ್ವಾಳ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆ

Update: 2016-09-24 12:41 GMT

  ಬಂಟ್ವಾಳ,ಸೆ.24: ನಕಲಿ ದಾಖಲೆ ಪತ್ರ ಸೃಷ್ಟಿಸುವ ಮೂಲಕ ತಾಲೂಕಿನಲ್ಲಿ ಸಾವಿರಾರು ಎಕ್ರೆ ಜಮೀನು ಅಕ್ರಮ-ಸಕ್ರಮ ಯೋಜನೆಯಲ್ಲಿ ಗುಳುಂ ಮಾಡಲಾಗಿದೆ ಎಂಬ ವಿಚಾರ ತಾ.ಪಂ.ನ ಎಸ್‌ಜಿಎಸ್‌ಆರ್ ವೈ ಸಭಾಂಗಣದಲ್ಲಿ ಶನಿವಾರ ನಡೆದ ಬಂಟ್ವಾಳ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.

ನಾಮನಿರ್ದೆಶಿತ ಸದಸ್ಯ ರಾಜೇಶ್ ಬಾಳೆಕಲ್ಲುರವರು ವಿಷಯ ಪ್ರಸ್ತಾಪಿಸಿ ಗ್ರಾಮ ಕರಣಿಕರಿಂದ ಹಿಡಿದು ತಹಶೀಲ್ದಾರ ಹಂತದ ವರೆಗಿನ ಅಧಿಕಾರಿಗಳ ಪೋರ್ಜರಿ ಸಹಿ ಬಳಸಿ ನಕಲಿ ದಾಖಲೆಯನ್ನು ಸೃಸಿಷ್ಟಿಕೊಂಡು ಸರಕಾರಿ ಜಮೀನನ್ನು ಉಳ್ಳವರು ಸಕ್ರಮಗೊಳಿಸಿದ್ದಾರೆ ಇದರಲ್ಲಿ ತಾಲೂಕಿನ ಕೆಲವು ನಿವೃತ್ತ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಆಗ್ರಹಿಸಿದರು.

ಈ ಪ್ರಕರಣಗಳಲ್ಲಿ ತಾಲೂಕು ಮಟ್ಟದ ತನಿಖೆ ನಡೆದಿದೆಯಾದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮವಾಗಿಲ್ಲ ಎಂದು ಸಭೆಯ ಗಮನ ಸೆಳೆದ ರಾಜೇಶ್ ಬಾಳೆಕಲ್ಲು ಪ್ರಕರಣದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲು ಮುಂದಾಗಿದ್ದೆವು. ಆದರೆ ಈ ಸಂಬಂಧವಾಗಿ ಕಂದಾಯ ಇಲಾಖೆ ಸಮರ್ಪಕವಾದ ದಾಖಲೆಯ ಕಡತಗಳನ್ನು ನೀಡುತ್ತಿಲ್ಲ ಎಂದು ದೂರಿದರು. ಈ ಸಂದರ್ಭದಲ್ಲಿ ಸಭಾಧ್ಯಕ್ಷತೆ ವಹಿಸಿದ್ದ ಸಚಿವ ರಮಾನಾಥ ರೈಯವರು ತಾವು ಎಸಿಬಿಗೆ ದೂರು ನೀಡಿ ನಾನು ಕೂಡಾ ಜಿಲ್ಲಾಧಿಕಾರಿಯವರಿಗೆ ತನಿಖೆಗೆ ನಿರ್ದೇಶಿಸಿ ಪತ್ರ ಬರೆಯುವುದಾಗಿ ತಿಳಿಸಿದರು. ಪಡಿತರ ರದ್ದು: ಜಲ್ಲೆಯಲ್ಲೇ ಬಂಟ್ವಾಳ ತಾಲೂಕಿನಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ವಿದ್ಯುತ್ ಬಿಲ್‌ನ ನೆಪದಲ್ಲಿ ಬಿಪಿಎಲ್ ಪಡಡಿತರ ಚೀಟಿಯನ್ನು ರದ್ದುಪಡಿಸಿರುವುದಕ್ಕೆ ಅತೃಪ್ತಿಪಡಿಸಿದ ಸಚಿವ ರಮಾನಾಥ ರೈ ಅವರು, ಸಣ್ಣ ಪುಟ್ಟ ವಿಚಾರವನ್ನು ಮುಂದಿಟ್ಟು ರದ್ದುಗೊಳಿಸಿರುವ ಪಡಿತರ ಚೀಟಿಗಳನ್ನು ಸರಿಪಡಿಸಿ ಮುಂದಿನ ಸಭೆಯಲ್ಲಿ ವರದಿ ಸಲ್ಲಿಸುವಂತೆ ಆಹಾರ ಪೂರೈಕೆ ಇಲಾಖೆ ಅಧಿಕಾರಿಗೆ ಸೂಚಿದರು. ಪಡಿತರ ಚೀಟಿ ವ್ಯವಸ್ಥೆ ನೀಡಿಕೆಯಲ್ಲಿ ಹಲವು ಮಾನದಂಡಗಳನ್ನು ಬದಲಾಯಿಸಲಾಗಿದೆ. ಸಾರ್ವಜನಿಕರು ಇದಕ್ಕೆ ಹೊಂದಿಕೊಂಡು ಪಡಿತರ ಚೀಟಿ ಪಡೆದುಕೊಳ್ಳುವಂತೆ ಸಚಿವರು ಸೂಚಿಸಿದರು.

ಡೆಂಗ್ ನಿಯಂತ್ರಣದಲ್ಲಿ: ತಾಲೂಕಿನಲ್ಲಿ ಡೆಂಗ್ಯೂ ಮಲೇರಿಯಾ ರೋಗ ಸಂಪೂರ್ಣ ನಿಯಂತ್ರಣದಲ್ಲಿದೆ. ಈ ವರ್ಷದ ಆಗಸ್ಟ್‌ವರೆಗೆ 413 ಶಂಕಿತ ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು ಈ ಪೈಕಿ 81 ಪ್ರಕರಣ ದೃಢಪಟ್ಟಿದೆ. ಕಳೆದ 20 ದಿನಗಳಲ್ಲಿ ತಾಲೂಕಿನಲ್ಲಿ ಯವುದೇ ಡೆಂಗ್ಯೂ ಪ್ರಕರಣ ದಾಖಲಾಗಿಲ್ಲ ಎಂದು ಆರೋಗ್ಯಾಧಿಕಾರಿ ದೀಪಾ ಪ್ರಭು ಅವರು ಸಚಿವರ ಪ್ರಶ್ನೆಗೆ ಉತ್ತರಿಸಿದರು.

ಅಡಿಕೆ ಕೊಳೆ ರೋಗ ಸಂಬಂಧವಾಗಿ ಪರಿಹಾರ ಬಾಕಿ ಇರುವ ಫಲಾನುಭವಿಗಳಿಗೆ ತಕ್ಷಣ ಪರಿಹಾರ ನೀಡುವ ನಿಟ್ಟಿನಲ್ಲಿ ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಗಮನಹರಿಸಬೇಕು. ಹಾಗೆಯೇ ಆರ್‌ಟಿಸಿ ಇಲ್ಲದ ಅಂಗನಾಡಿ ಕೇಂದ್ರಗಳಿಗೆ ಕೂಡಲೇ ಆರ್‌ಟಿಸಿ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಸಚಿವರು ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎರಡು ಎಕರೆ ಸರಕಾರಿ ಜಮೀನನ್ನು ಸರಕಾರಿ ಉದ್ದೇಶಿತ ಕೆಲಸಗಳಿಗೆ ಮೀಸಲಿಡುವಂತೆ ಸಚಿವ ರಮಾನಾಥ ರೈ ಅಧಿಕಾರಿಗಳಿಗೆ ನಿದೇರ್ಶನ ನೀಡಿದರು.

ತಾಲೂಕಿನಲ್ಲಿ ಕಾರ್ಮಿಕ ಭವನ ನಿರ್ಮಿಸಲು ಉದ್ದೇಶಿಸಲಾಗಿದ್ದು ಈ ಸಂಬಂಧವಾಗಿ ಸೂಕ್ತ ಜಮೀನನ್ನು ಗುರುತಿಸಿ ಪ್ರಸ್ತಾವಣೆ ಸಲ್ಲಿಸುವಂತೆ ಕಾರ್ಮಿಕ ಇಲಾಖಾ ಅಧಿಕಾರಿಯವರಿಗೆ ಸಚಿವ ರಮಾನಾಥ ರೈ ಸೂಚಿಸಿದರು. ಸಜೀಪ ನಡು ಗ್ರಾಮದ ಕಂಚಿನಡ್ಕಪದವಿನಲ್ಲಿ ಪುರಸಭೆ ವತಿಯಿಂದ ನಿರ್ಮಾಣ ಹಂತದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಚಿವರು ಮುಖ್ಯಾಧಿಕಾರಿ ಸುಧಾಕರ್ ಅವರಿಗೆ ತಾಕೀತು ಮಾಡಿದರು. ಇಲ್ಲಿನ ಅಂಗನವಾಡಿ ಕೇಂದ್ರಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಸೂಕ್ತ ಜಮೀನು ಗುರುತಿಸಲಾಗಿದೆ ಎಂದು ಮುಖ್ಯಾಧಿಕಾರಿಯವರು ಸಚಿವರ ಗಮನ ಸೆಳೆದರು.

ಅಂಡರ್ ಪಾಸ್: ನರಿಕೊಂಬು ಸೇರಿದಂತೆ ಈ ಭಾಗದಿಂದ ಪಾಣೆಮಂಗಳೂರಿಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ರಾಷ್ಟ್ರೀಯ ಹೆದ್ದಾರಿ 75ರ ಪಾಣೆಮಂಗಳೂರಿನಲ್ಲಿ ಅಂಡರ್ ಪಾಸ್ ನಿರ್ಮಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಲು ತೀರ್ಮಾನಿಸಲಾಯಿತು.

ವೇದಿಕೆಯಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷ ಧನಲಕ್ಷ್ಮೀ ಬಂಗೇರ, ತಹಶೀಲ್ದಾರ್ ಪುರಂದರ ಹೆಗ್ಡೆ ಉಪಸ್ಥಿತರಿದ್ದರು. ಜಿ.ಪಂ. ಸದಸ್ಯರಾದ ಪದ್ಮಶೇಖರ ಜೈನ್, ಮಂಜುಳಾ ಮಾವೆ, ಕಮಲಾಕ್ಷಿ ಪೂಜಾರಿ ಹಾಗೂ ಕೆ.ಡಿ.ಪಿ ನಾಮ ನಿರ್ದೇಶಿತ ಸದಸ್ಯರಾದ ಉಮೇಶ್ ಬೋಳಂತೂರು, ಹೈದರ್ ಅವರು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು. ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ ಸ್ವಾಗತಿಸಿ ವಂದಿಸಿದರು. ಇಲಾಖಾಧಿಕಾರಿಗಳು ತಮ್ಮ ಇಲಾಖಾ ವಾರು ಪ್ರಗತಿಯನ್ನು ಸಭೆಗೆ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News