ತುಳು ಭಾಷೆಯ ಹಿರಿಮೆ ಇನ್ನಷ್ಟು ಪಸರಿಸಲಿ: ಸಚಿವ ರೈ
ಮಂಗಳೂರು, ಸೆ. 24: ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ತುಳು ಭಾಷೆ ಹಾಗೂ ತುಳುನಾಡಿನ ಹಿರಿಮೆಯನ್ನು ನಮ್ಮ ಹಿರಿಯರು ಈಗಾಗಲೇ ಸಾಕಷ್ಟು ವಿಸ್ತರಿಸುವ ಕಾರ್ಯ ಮಾಡಿದ್ದು, ಯುವ ಜನಾಂಗ ಈ ನಿಟ್ಟಿನಲ್ಲಿ ತಮ್ಮ ಕಾರ್ಯವನ್ನು ಮುಂದುವರಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಿಸಿದರು.
ಉರ್ವಾಸ್ಟೋರ್‌ನ ತುಳುಭವನದಲ್ಲಿ ಇಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2015ನೆ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನವನ್ನು ವಿತರಿಸಿ ಅವರು ಮಾತನಾಡಿದರು.
ಭಾಷೆಗೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ. ಆ ಕಾರ್ಯವನ್ನು ತುಳು ಭಾಷೆ ಈಗಾಗಲೇ ಮಾಡಿದೆ. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಗೆ ಪ್ರತ್ಯೇಕ ರಾಜ್ಯ ಎಂಬುದು ಇಲ್ಲವಾದರೂ ನಮ್ಮ ಪ್ರಾಬಲ್ಯ ಬೇರೆ ಯಾವುದೇ ಭಾಷೆಗೆ ಕಡಿಮೆಯಾಗಿಲ್ಲದಿರುವುದು ನಮ್ಮ ಹೆಮ್ಮೆ ಎಂದವರು ಹೇಳಿದರು.
ತುಳು ಭಾಷೆಯನ್ನು ಬೆಳೆಸುವಲ್ಲಿ ರಾಜ್ಯದ ತುಳು ಸಾಹಿತ್ಯ ಅಕಾಡೆಮಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಅಕಾಡೆಮಿಗೆ ಈ ಹಿಂದೆ ಆಯ್ಕೆಯಾದ ಅಧ್ಯಕ್ಷರು ಹಾಗೂ ಈಗಿನ ಅಧ್ಯಕ್ಷರ ಪರಿಶ್ರಮದಿಂದ ಇದು ಸಾಧ್ಯವಾಗಿದ್ದು, ರಾಜ್ಯದಲ್ಲಿ ಇರುವ ಹಲವಾರು ಅಕಾಡೆಮಿಗಳಿಗೆ ಸ್ವಂತ ನೆಲೆ ಇಲ್ಲದಿರುವಾಗ ತುಳು ಅಕಾಡೆಮಿಯು ಸ್ವಂತ ನೆಲೆಯ ಮೂಲಕ ತನ್ನ ಕಾರ್ಯವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಾಗಿದೆ ಎಂದವರು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ಡಿ.ಕೆ. ಚೌಟ ಮಾತನಾಡಿ, ತುಳು ಸಾಹಿತಿಗಳು ತುಳು ಲಿಪಿಯಲ್ಲಿ ಬರೆಯುವಂತಾಗಬೇಕು. ತುಳು ಪುಸ್ತಕಗಳನ್ನು ತುಳುವರು ಓದುವಂತಾಗಬೇಕು. ಆಗ ತುಳು ಭಾಷೆ ಬೆಳೆಯಲು ಸಾಧ್ಯ ಎಂದರು.
ಜನಪದ ವಿದ್ವಾಂಸ ಡಾ. ಚಿನ್ನಪ್ಪ ಗೌಡ ಮಾತನಾಡಿ, ರಾಜ್ಯದಲ್ಲಿ ತುಳು ಅಕಾಡೆಮಿ ಇಲ್ಲದಿರುತ್ತಿದ್ದರೆ, ತುಳುವಿನಲ್ಲಿ ಇಷ್ಟೊಂದು ಬೆಳವಣಿಗೆ, ಪ್ರಗತಿ ಕಾಣಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ತುಳುವಿನ ಆವರಣವೊಂದನ್ನು ನಿರ್ಮಿಸುವ ಕೆಲಸವನ್ನು ಅಕಾಡೆಮಿ ಮಾಡಿದೆ ಎಂದು ಶ್ಲಾಘಿಸಿದರು.
ಶಾಸಕ ಜೆ.ಆರ್. ಲೋಬೋ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್‌ನ ವಿಪಕ್ಷ ನಾಯಕ ಗಣೇಶ್ ಕಾರ್ಣಿಕ್, ಶಾಸಕಿ ಶಕುಂತಳಾ ಶೆಟ್ಟಿ, ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಇಬ್ರಾಹೀಂ ಕೋಡಿಜಾಲ್, ಅಕಾಡೆಮಿ ಸದಸ್ಯರಾದ ಸದಸ್ಯರಾದ ವೇದಾವತಿ, ಕೆ.ಟಿ. ವಿಶ್ವನಾಥ, ರಘು ಇಡ್ಕಿದು, ಮೋಹನ್ ಕೊಪ್ಪಲ, ರೂಪಕಲಾ ಆಳ್ವ, ಜಯಶೀಲ ಮೊದಲಾದವರು ಉಪಸ್ಥಿತರಿದ್ದರು.
ತುಳು ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಹಿಂದೆ ತಲಾ 10,000 ರೂ.ಗಳ ಗೌರವ ಪ್ರಶಸ್ತಿಯು ಪ್ರಸಕ್ತ ಸಾಲಿನಿಂದ 50,000 ರೂ.ಗಳಿಗೇರಿದ್ದರೆ, ಪುಸ್ತಕ ಬಹುಮಾನಡಿ ನಗದು ಬಹುಮಾನವು ತಲಾ 25,000 ರೂ.ಗಳಿಗೆ ಏರಿಕೆ ಮಾಡಿ ರಾಜ್ಯ ಸರಕಾರ ತುಳು ಬರಹಗಾರರನ್ನು ಪ್ರೋತ್ಸಾಹಿಸಿದೆ ಎಂದರು. ಡಿ.ಎಂ. ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಬೆಂಗಳೂರಿನ ಡಾ. ಇಂದಿರಾ ಹೆಗ್ಡೆ (ತುಳು ಸಾಹಿತ್ಯ ಮತ್ತು ಸಂಶೋಧನೆ), ಕೋಟಿ ಪರವ (ತುಳು ಜಾನಪದ) ಹಾಗೂ ಬೇತ ಕುಂಞ ಕುಲಾಲ್ (ತುಳು ಯಕ್ಷಗಾನ)ರವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ 2015ನೆ ಸಾಲಿನ ಗೌರವ ಪ್ರಶಸ್ತಿ ಸ್ವೀಕರಿಸಿದರು.
2015ನೆ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಯಡಿ ತುಳು ಕಥಾ ವಿಭಾಗದಲ್ಲಿ ‘ಗುತ್ತುದಿಲ್ಲದ ಜಾಲ್‌ಡ್’ ಪುಸ್ತಕ ಬರೆದ ವಸಂತಿ ಶೆಟ್ಟಿ ಬ್ರಹ್ಮಾವರ, ಕವನ ವಿಭಾಗದಲ್ಲಿ ‘ಬೂಳ್ಯ’ ಕವನಕ್ಕಾಗಿ ಚೆನ್ನಪ್ಪ ಅಳಿಕೆ, ನಾಟಕ ವಿಭಾಗದಲ್ಲಿ ‘ಗಾಲ’ ಕೃತಿಯನ್ನು ರಚಿಸಿರುವ ಶಿಮಂತೂರು ಚಂದ್ರಹಾಸ ಸುವರ್ಣರವರು ಪ್ರಶಸ್ತಿ ಸ್ವೀಕರಿಸಿದರು.