ನಡ: ದಫನಭೂಮಿಯನ್ನು ಯಥಾಸ್ಥಿತಿಯಲ್ಲಿ ಉಳಿಸಲು ಒತ್ತಾಯಿಸಿ ತಹಶೀಲ್ದಾರ್‌ರಿಗೆ ಮನವಿ
ಬೆಳ್ತಂಗಡಿ, ಸೆ.24: ಮುಸ್ಲಿಮರ ದಫನ ಭೂಮಿಗೆಂದು ತಾಲೂಕಿನ ನಡ ಗ್ರಾಮದಲ್ಲಿ ಮೀಸಲಿರಿಸಲಾಗಿರುವ ಸ.ನಂ 126/2ರಲ್ಲಿರುವ 4.30 ಎಕ್ರೆ ಜಮೀನನ್ನು ಯಥಾಸ್ಥಿತಿಯಲ್ಲಿರುವಂತೆ ಕಾಯ್ದಿರಿಸಲು ಇಲ್ಲಿನ ಮುಹಿಯುದ್ದೀನ್ ಜುಮಾ ಮಸೀದಿಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ತಹಶೀಲ್ದಾರ್‌ರಿಗಿಂದು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಈ ದಫನ ಭೂಮಿಯನ್ನು ಹಿಂದೂ ರುದ್ರಭೂಮಿಯಾಗಿ ಕಾಯ್ದಿರಿಸುವಂತೆ ಕೆಲವು ಸಂಘಟನೆಗಳು ಬೇಡಿಕೆ ಮುಂದಿಟ್ಟಿರುವ ಹಿನ್ನೆಲೆಯಲ್ಲಿ ಈ ಮನವಿ ಮಾಡಲಾಗಿದೆ.
ಇಲ್ಲಿರುವ ದಫನ ಭೂಮಿಯನ್ನು ಕಳೆದ ಸುಮಾರು 50 ವರ್ಷಗಳಿಂದ ಮುಸ್ಲಿಮರು ಬಳಸುತ್ತಿದ್ದಾರೆ. ಬೇರೆ ಯಾವುದೇ ಧರ್ಮದವರು ಇಲ್ಲಿ ಇದುವರೆಗೆ ಅಂತ್ಯ ಸಂಸ್ಕಾರ ನಡೆಸಿಲ್ಲ. ಅಲ್ಲದೇ ಕಂದಾಯ ಇಲಾಖೆಯ ದಾಖಲೆಯಲ್ಲೂ ಇದು ದಫನ ಭೂಮಿ ಎಂದೇ ಉಲ್ಲೇಖಿಸಲ್ಪಟ್ಟಿದೆ. ಆದರೆ ಇದೀಗ ಹೊಸ ವಿವಾದವೊಂದನ್ನು ಸೃಷ್ಟಿಸಲು ಹೊರಟಿದ್ದು ಸದ್ರಿ ಜಮೀನನ್ನು ಕಾನೂನು ಬಾಹಿರವಾಗಿ ಕಸಿದುಕೊಳ್ಳಲು ಹೊರಟಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಪ್ರದೇಶದಲ್ಲಿ ಸುಮಾರು 100ಕ್ಕೂ ಹೆಚ್ಚು ಮುಸ್ಲಿಮರ ಮನೆಗಳಿದ್ದು ಇವರಿಗೆ ಬೇರ ದಫನ ಭೂಮಿ ಇಲ್ಲವಾಗಿದೆ. ಈ ದಫನ ಭೂಮಿಯನ್ನು ಯಥಾಸ್ಥಿತಿಯಲ್ಲಿ ಕಾನೂನು ಬದ್ದವಾಗಿ ಉಪಯೋಗಿಸಲು ಅವಕಾಶ ಒದಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಜಿಪಂ ಸದಸ್ಯ ಶಾಹುಲ್ ಹಮೀದ್, ಮಸೀದಿ ಅಧ್ಯಕ್ಷ ಹಸೈನಾರ್, ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಇಸ್ಮಾಯೀಲ್ ಮದನಿ ಉಜಿರೆ, ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ.ನಝೀರ್, ಎಸ್‌ಡಿಪಿಐ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಕಾಂಗ್ರೆಸ್ ಮುಖಂಡ ಬಿ.ಎಂ. ಹಮೀದ್, ಎಚ್.ಕೆ.ಇಸ್ಮಾಯೀಲ್, ಪಿ.ಯು.ಆಲಿಕುಂಞಿ ಸಖಾಫಿ, ಅಬ್ದುಲ್ ಸಲಾಂ ತಂಙಳ್, ಉಮ್ಮರ್ ಸಅದಿ ೊದಲಾದವರು ಉಪಸ್ಥಿತರಿದ್ದರು.