×
Ad

ಬಂಟ್ವಾಳ: ಜಿಲ್ಲಾ ಮಟ್ಟದ ಎಸ್‌ಟಿ ಎಸ್‌ಸಿ ಕುಂದುಕೊರತೆ ನಿವಾರಣಾ ಸಭೆ

Update: 2016-09-24 22:28 IST

ಬಂಟ್ವಾಳ,ಸೆ.24: ಕಳ್ಳಭಟ್ಟಿ ಸಾರಾಯಿ ಹಾಗೂ ಅಕ್ರಮ ಸಾರಾಯಿ ಮಾರಾಟವನ್ನು ತಡೆಗಟ್ಟುವಂತೆ ಅಬಕಾರಿ ಇಲಾಖೆಗೆ ದೂರು ನೀಡಿ ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೆ ಇಲಾಖಾ ಅಧಿಕಾರಿಗಳೇ ಅಕ್ರಮ ಸಾರಾಯಿ ಮಾರಾಟಗಾರರಿಗೆ ಪೂರ್ವ ಮಾಹಿತಿ ನೀಡಿ ದಾಳಿ ವೇಳೆ ತಪ್ಪಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತಾರೆ ಎಂದು ದಲಿತ ಮುಖಂಡರು ಆರೋಪಿಸಿದರು.

        ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ.ಬೊರಾಸೆ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಎಸ್‌ಟಿ ಎಸ್‌ಸಿ ಕುಂದುಕೊರತೆ ನಿವಾರಣಾ ಸಭೆಯಲ್ಲಿ ಅಬಕಾರಿ ಇಲಾಖೆಯ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ದಲಿತ ಕಾಲನಿಗಳ ವ್ಯಾಪ್ತಿಯಲ್ಲಿ ಕಳ್ಳಭಟ್ಟಿ ತಯಾರಿ ಹಾಗೂ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಆರೋಪಿಗಳ ಬಗ್ಗೆ ಕ್ರಮ ಜರಗಿಸುವುದಿಲ್ಲ. ಕೆಲವೊಮ್ಮೆ ಇಲಾಖೆಯ ಅಧಿಕಾರಿಗಳೇ ಆರೋಪಿಗಳಿಗೆ ಮಾಹಿತಿ ನೀಡಿ ದಾಳಿ ನಡೆಸುತ್ತಾರೆ ಎಂದು ದೂರಿದರು. ಈ ಸಂದರ್ಭ ಅಬಕಾರಿ ಇಲಾಖಾಧಿಕಾರಿ ಪ್ರಮೀಳಾ ಮಾತನಾಡಿ ಕಳ್ಳಭಟ್ಟಿ ಸಾರಾಯಿ ಮಾರಾಟ ಎಲ್ಲೂ ಇಲ್ಲ. ಅಕ್ರಮ ಸಾರಾಯಿ ಮಾರಾಟದ ಬಗ್ಗೆ ದೂರುಗಳು ಬಂದ ಬಗ್ಗೆ ಈಗಾಗಲೇ ದಾಳಿ ಕಾರ್ಯಚರಣೆ ಮಾಡಿದ್ದೇವೆ. ಅದರೆ ಅಲ್ಲಿ ಹೋಗುವ ಮೊದಲೇ ಅವರು ಪರಾರಿಯಾಗಿರುತ್ತಾರೆ. ಸಾರ್ವಜನಿಕರೇ ಯಾರೋ ಅವರಿಗೆ ಸೂಚನೆ ನೀಡುತ್ತಾರೆ ಎಂದು ತಿರುಗೇಟು ನೀಡಿದರು. ಈ ಸಂದರ್ಭ ಕೆಲ ಹೊತ್ತುಗಳ ಕಾಳ ಅಧಿಕಾರಿ ಹಾಗೂ ದಲಿತ ಮುಖಂಡರಾದ ದಿನೇಶ್ ಅಮ್ಟೂರು, ರಾಜಪಲ್ಲಮಜಲು, ಶೇಖರ್ ನಡುವೆ ಮಾತಿನ ಚಕಮಕಿ ನಡೆಯಿತು. ಅಬಕಾರಿ ಇಲಖಾಧಿಕಾರಿ ನಮ್ಮನ್ನು ಅವಮಾನ ಮಾಡುತ್ತಿದ್ದಾರೆ. ಈ ಸಭೆಯಲ್ಲಿ ಅವರು ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು. ಈ ಸಂದರ್ಭ ಮಧ್ಯೆ ಪ್ರವೆಶಿಸಿದ ನಾರಾಯಣ ಪುಂಚಮೆ ಸಭೆಯಲ್ಲಿ ಚರ್ಚೆಯ ಹಾದಿ ತಪ್ಪುತ್ತಿದೆ. ನೀವು ಅಧಿಕಾರಿಗಳನ್ನು ಗುರಿಯಾಗಿಸಿ ಮಾತನಾಡುವುದು ಸರಿಯಲ್ಲ ಎಂದು ಸಮಧಾನ ಪಡಿಸಿದ್ದು ಕೆಲ ಸದಸ್ಯರನ್ನು ಕೆರಳಿಸಿತು. ಅಂತಿಮವಾಗಿ ಎಸ್ಪಿ ಭೂಷಣ್ ಅವರೇ ಮಾತನಾಡಿ ಮುಂದಿನ ಸಭೆಯಲ್ಲಿ ಅಬಕಾರಿ ಇಲಾಖೆಯ ಡಿವೈಎಸ್ಪಿಯವರು ಭಾಗವಹಿಸಬೇಕು, ಅಕ್ರಮ ಮದ್ಯ ಮಾರಾಟದ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕರಿಗೆ ಸೂಚಿಸಿ ಚರ್ಚೆಗೆ ತೆರೆ ಎಳೆದರು.

ಮರಳು ದಂದೆ ನಿಲ್ಲಿಸಿ:

    ಅಕ್ರಮ ಮರಳು ದಂದೆಯಿಂದಾಗಿ ಮರಳುಗಾರಿಕೆಯನ್ನು ಜಿಲ್ಲಾಡಳಿತ ನಿಷೇಧಿಸಿದ್ದು ಒಂದು ಲೋಡು ಮರಳಿಗೆ ಈಗ 15 ಸಾವಿರಕ್ಕಿಂತಲೂ ಹೆಚ್ಚು ಹಣ ನೀಡಿ ಖರೀದಿಸ ಬೇಕಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲಿ ಕೋಟಿ ರುಪಾಯಿ ವೆಚ್ಚದ ಮನೆ ಕಟ್ಟುವವರು ಯಾರು ಇಲ್ಲ. ಮರಳುಗಾರಿಕೆ ನಿಷೇಧದಿಂದಾಗಿ ಮನೆಕಟ್ಟುವ ಬಡ ದಲಿತರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಬಿಜೆಪಿ ಎಸ್ಸಿ ಮೋರ್ಚದ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ತಕ್ಷಣ ಗಮನ ಹರಿಸಿ ಮನೆಕಟ್ಟುವ ಬಡ ದಲಿತರಿಗೆ ಮರಳು ಲಭ್ಯವಾಗುವಂತೆ ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು. ಹಲವು ವರ್ಷಗಳ ಹಿಂದೆ ನಡೆದ ದಲಿತ ಮುಖಂಡ ಶಿವಪ್ಪ ಬಂಗೇರ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಬೇಕು ಎಂದು ರಾಜಪಲ್ಲಮಜಲು ಆಗ್ರಹಿಸಿದರು. ಬಿ.ಸಿ.ರೋಡು ಮುಖ್ಯವೃತ್ತಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿಡುವಂತೆ ಸಲ್ಲಿಸಿದ ಪ್ರಸ್ತಾವನೆಯನ್ನು ಸರಕಾರದ ಗಮನಕ್ಕೆ ತರುವಂತೆ ಆಗ್ರಹಿಸಿದರು.

ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ರವೀಶ್, ವೃತ್ತ ನಿರೀಕ್ಷಕ ಬಿ.ಕೆ. ಮಂಜಯ್ಯ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಇಲಾಖಾ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News