ಅವನತಿಯತ್ತ ಮುಖಮಾಡಿರುವ ಕಲೆಗಳನ್ನು ಪ್ರೋತ್ಸಾಹಿಸಿ : ಪ್ರೊ. ಭೈರಪ್ಪ
ಮಂಗಳೂರು,ಸೆ.24: ನಮ್ಮ ದೇಶದಲ್ಲಿ ನೂರಾರು ಕಲಾಪ್ರಕಾರಗಳಿದ್ದು ಅವು ನಮ್ಮ ಜೀವನಾಡಿಯಿದ್ದಂತೆ. ಅಂತಹ ಕಲಾ ಪ್ರಕಾರಗಳು ಜನಜೀವನದಿಂದ ದೂರವಾಗುತ್ತಿರು ಸನ್ನಿವೇಶ ನಿರ್ಮಾಣವಾಗುತ್ತಿದ್ದು ಕಲಾಸಕ್ತರು ಅವನತಿಯತ್ತ ಮುಖಮಾಡಿರುವ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಕೆ ಭೈರಪ್ಪ ಹೇಳಿದರು.
‘ಅವರು ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸಹಯೋಗದೊಂದಿಗೆ ರವೀಂದ್ರ ಕಲಾ ಭವನದಲ್ಲಿ ಶತಾವಧಾನಿ ಡಾ. ಆರ್ ಗಣೇಶ್ ಅವರ ನೇತೃತ್ವದ ಅಷ್ಟಾವಧಾನ’ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶತಾವಧಾನಿ ಡಾ. ಆರ್. ಗಣೇಶ್ ಅವರು ಮಾತನಾಡಿ ಪ್ರಾಚೀನ ಸಾಹಿತ್ಯ ಮತ್ತು ವಿದ್ವತ್ ವಲಯದಲ್ಲಿ ದಕ್ಷಿಣಕನ್ನಡದ ಜನ ಇಡೀ ಕರ್ನಾಟಕಕ್ಕೇ ಆಸ್ತಿಯಾಗಿದ್ದಾರೆ. ಅಷ್ಟಾವಧಾನವನ್ನು ಕಳೆದ ಮೂರು ದಶಕಗಳಿಂದ ಮಾಡುತ್ತಾ ಬಂದಿದ್ದರೂ ಇದೇ ಮೊದಲ ಬಾರಿಗೆ ವಿಶ್ವವಿದ್ಯಾನಿಲಯವೊಂದು ಅವಕಾಶ ಕಲ್ಪಿಸಿರುವುದು ಸಂತೋಷ ಎಂದರು.
ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಪ್ರಸನ್ನ ರೈ, ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಉದಯ ಇರ್ವತ್ತೂರು, ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಭೈರಪ್ಪನವರು ಶತಾವಧಾನಿ ಡಾ. ಆರ್ ಗಣೇಶ್ ಅವರನ್ನು ಸನ್ಮಾನಿಸಿದರು. ಪ್ರೊ. ಕುಮಾರ ಸುಬ್ರಹ್ಮಣ್ಯ ವಂದಿಸಿದರು.
ಡಾ. ಆರ್ ಗಣೇಶ್ ಅವರು ಅಷ್ಟಾವಧಾನವನ್ನು ನಡೆಸಿಕೊಟ್ಟರು. ಸುಮಾರು ಮೂರೂವರೆ ಗಂಟೆಗಳ ಅವಧಿಯಲ್ಲಿ ಗದ್ಯ - ಪದ್ಯಗಳಲ್ಲಿ ಹರಳುಗಟ್ಟಿದ ಈ ಕಾರ್ಯಕ್ರಮದಲ್ಲಿ ಪೃಚ್ಛಕರಾಗಿ ಡಾ. ಪಾದೇಕಲ್ಲು ವಿಷ್ಣು ಭಟ್ಟ (ನಿಷೇಧಾಕ್ಷರಿ), ವಿದ್ವಾನ್ ಮಹೇಶ್ ಭಟ್ಟ ಹಾರ್ಯಾಡಿ (ಸಮಸ್ಯಾಪೂರಣ), ಡಾ. ಬಾಲಕೃಷ್ಣ ಭಾರದ್ವಾಜ (ದತ್ತಪದೀ), ಶ್ರೀಧರ ಡಿ.ಎಸ್ (ನ್ಯಸ್ತಾಕ್ಷರಿ), ಡಾ. ರಾಘವ ನಂಬಿಯಾರ್ (ಆಶುಕವಿತ್ವ), ಚಂದ್ರಶೇಖರ ಕೆದಿಲಾಯ (ಕಾವ್ಯ ವಾಚನ), ಅಪ್ರಸ್ತುತ ಪ್ರಸಂಗ (ತಾರಾನಾಥ ವರ್ಕಾಡಿ), ಶ್ರೀಗಣೇಶ್ ಪಿ (ಸಂಖ್ಯಾಬಂಧ) ಭಾಗವಹಿಸಿದರು.