10 ರೂ. ನಾಣ್ಯ ತಿರಸ್ಕರಿಸಿದರೆ ದೇಶದ್ರೋಹದ ಆರೋಪ !
ಆಗ್ರಾ, ಸೆ.25: ಉತ್ತರ ಪ್ರದೇಶದಲ್ಲಿ ಹತ್ತು ರೂಪಾಯಿ ನಾಣ್ಯವನ್ನು ತಿರಸ್ಕರಿಸಿದರೆ ದೇಶದ್ರೋಹದ ಪ್ರಕರಣ ದಾಖಲಿಸಲಾಗುವುದು ಎಂದು ಫಿಲಿಬಿಟ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಚ್ಚರಿಕೆ ನೀಡಿದ್ದಾರೆ.
10 ರೂಪಾಯಿ ನಾಣ್ಯ ರಾಷ್ಟ್ರೀಯ ಕರೆನ್ಸಿಯಾಗಿದ್ದು, ಇದನ್ನು ನಿರಾಕರಿಸುವ ಹಕ್ಕು ಯಾರಿಗೂ ಇಲ್ಲ. ಈ ನಾಣ್ಯ ಹೊಂದಿರುವವರಿಗೆ ಭಾರತ ಸರಕಾರ ಮೌಲ್ಯವನ್ನು ನೀಡುವ ಭರವಸೆ ನೀಡುತ್ತದೆ. ಆರ್‌ಬಿಐ ನಿಯಮಾವಳಿಗಳ ಪ್ರಕಾರ, ಭಾರತೀಯ ಕರೆನ್ಸಿ ಸ್ವೀಕರಿಸಲು ನಿರಾಕರಿಸುವವರ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 124ರ ಅನ್ವಯ ದೇಶದ್ರೋಹದ ಪ್ರಕರಣ ದಾಖಲಿಸಬಹುದಾಗಿದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಮಸೂಮ್ ಅಲಿ ಸರ್ವರ್ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ವಾಟ್ಸ್ ಆಪ್ ಮತ್ತು ಫೇಸ್‌ಬುಕ್‌ನಲ್ಲಿ ವದಂತಿಗಳು ಹಬ್ಬಿದ ಹಿನ್ನೆಲೆಯಲ್ಲಿ 10 ರೂಪಾಯಿ ನಾಣ್ಯವನ್ನು ಯಾರೂ ಸ್ವೀಕರಿಸುತ್ತಿಲ್ಲ. ಈ ನಾಣ್ಯವನ್ನು ಚಲಾವಣೆಯಿಂದ ತೆಗೆಯಲಾಗಿದೆ ಎಂಬ ಸಂದೇಶ ವ್ಯಾಪಕವಾಗಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂಥದ್ದೇ ಪರಿಸ್ಥಿತಿ 2-3 ತಿಂಗಳಿನಿಂದ ಇದೆ. ಆಡಳಿತ ಯಂತ್ರ ಮತ್ತು ಬ್ಯಾಂಕ್‌ಗಳು, ನಾಣ್ಯವನ್ನು ಚಲಾವಣೆಯಿಂದ ತೆಗೆದಿಲ್ಲ ಎಂದು ಸ್ಪಷ್ಟನೆ ನೀಡಿದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಆರ್‌ಬಿಐ ಕೂಡಾ ಸೆಪ್ಟೆಂಬರ್ 20ರಂದು ಎಚ್ಚರಿಕೆ ನೀಡಿ, 10 ರೂಪಾಯಿ ನಾಣ್ಯ ಸ್ವೀಕರಿಸದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.