ಔಷಧಿ ಕಂಪೆನಿಗಳಿಗೆ ಅಚ್ಛೇ ದಿನ್ ದಯಪಾಲಿಸಿದ ಕೇಂದ್ರ

Update: 2016-09-25 03:31 GMT

ಹೊಸದಿಲ್ಲಿ,ಸೆ.25: ಮೋದಿ ಆಡಳಿತದಲ್ಲಿ ಔಷಧಿ ಕಂಪೆನಿಗಳಿಗೆ ಅಚ್ಚೇ ದಿನ್ ಭಾಗ್ಯ ಸಿಕ್ಕಿದೆ. ಮರೆಗುಳಿ ರೋಗ, ಮಧುಮೇಹ, ಹೈಪರ್‌ಟೆನ್ಷನ್ ಸೇರಿದಂತೆ ಅಗತ್ಯ ಔಷಧಿಗಳ ಪಟ್ಟಿಯ ಸುಮಾರು 100 ಔಷಧಿಗಳಿಗೆ ಶೇಕಡ 10ರಷ್ಟು ಬೆಲೆ ಏರಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಇವುಗಳನ್ನು ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ.

ಇದರ ಪರಿಣಾಮ ನೇರವಾಗಿ ರೋಗಿಗಳ ಮೇಲೆ ಆಗಲಿದ್ದು, ಹಲವು ವರ್ಷಗಳಿಂದ ಬೆಲೆ ನಿಯಂತ್ರಣ ಪಟ್ಟಿಯಲ್ಲಿದ್ದ ತಯಾರಿಕಾ ಕಂಪೆನಿಗಳಿಗೆ ಈ ನಿರ್ಧಾರ ವರದಾನವಾಗಿದೆ. ಔಷಧಿ ಬೆಲೆ ನಿಯಂತ್ರಣ ಸಂಸ್ಥೆಯ ಹಳೆ ಆದೇಶವನ್ನು ಮೀರಿ ಕೇಂದ್ರ ಸರಕಾರ, ಈ ಬೆಲೆ ಏರಿಕೆಗೆ ಅನುಮತಿ ನೀಡಿದೆ. ಈ ಔಷಧಿಗಳು ಇದೀಗ ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಯಿಂದ ಹಾಗೂ ಬೆಲೆ ನಿಯಂತ್ರಣದಿಂದ ಮುಕ್ತವಾಗಿವೆ.

ಇದಕ್ಕೂ ಮುನ್ನ ನ್ಯಾಷನಲ್ ಫಾರ್ಮಸೂಟಿಕಲ್ ಪ್ರೈಸಿಂಗ್ ಅಥಾರಿಟಿ ಕನಿಷ್ಠ ಒಂದು ವರ್ಷದ ವರೆಗೆ ಇವುಗಳ ಬೆಲೆ ಏರಿಸದಂತೆ ಆದೇಶ ನೀಡಿತ್ತು. ಹಲವು ಕಂಪೆನಿಗಳು ಈ ಆದೇಶದ ವಿರುದ್ಧ ಔಷಧ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ, ಈ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರ 2015ರ ಎಪ್ರಿಲ್‌ನಲ್ಲಿ 500ಕ್ಕೂ ಹೆಚ್ಚು ಔಷಧಿಗಳ ಬೆಲೆ ಏರಿಕೆಗೆ ಅನುಮತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News