ಕಾಸರಗೋಡು : ಅವ್ಯವಸ್ಥೆಗಳ ಆಗರವಾಗಿದೆ ಜಿ.ಪಂ.ನ ಮಹಿಳಾ ವಸತಿನಿಲಯ

Update: 2016-09-25 07:00 GMT

ಕಾಸರಗೋಡು, ಸೆ.25: ಕುಡಿಯುವ ನೀರು ಸೇರಿದಂತೆ ಯಾವುದೇ ಸೌಕರ್ಯಗಳು ಸಮರ್ಪಕವಾಗಿಲಲ್ಲದಿದ್ದರೂ ವರ್ಷಕ್ಕೆ ಮೂರು ಬಾರಿ ಬಾಡಿಗೆದರ ಏರಿಕೆಗೆ ಮಾತ್ರ ಅಧಿಕಾರಿಗಳು ಹಿಂದೆ ಬೀಳುತ್ತಿಲ್ಲ. ಇದು ಕಾಸರಗೋಡು ಜಿಲ್ಲಾ ಪಂಚಾಯತ್‌ನ ಮಹಿಳಾ ವಸತಿ ನಿಲಯದ ದುಸ್ಥಿತಿ.

ಒಂದು ವರ್ಷದಲ್ಲಿ ಮೂರು ಬಾರಿ ಎಂಬಂತೆ ಬಾಡಿಗೆಯನ್ನು 700 ರೂ.ನಿಂದ 1,200 ರೂ.ಗೆ ಏರಿಕೆ ಮಾಡಲಾಗಿದೆ. 12 ಮಂದಿ ಮಹಿಳಾ ಸರಕಾರಿ ನೌಕರರು, ಏಳು ಮಂದಿ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 31 ಮಂದಿ ವಿದ್ಯಾನಗರ ವಿದ್ಯಾಗಿರಿಯಲ್ಲಿರುವ ಈ ವಸತಿ ನಿಲಯದಲ್ಲಿದ್ದಾರೆ. ಈವರೆಗೆ 700 ರೂ. ಇದ್ದ ದರವನ್ನು 900 ರೂ.ಗೆ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ 1200ರೂ.ಗೆ ಹೆಚ್ಚಳ ಮಾಡಲಾಗಿದೆ. ಜೂನ್ 16 ರಿಂದ ಜುಲೈ ಮಧ್ಯದವರೆಗೆ ವಸತಿ ನಿಲಯಕ್ಕೆ ನೀರು ಸರಬರಾಜು ಸ್ಥಗಿತಗೊಂಡಿತ್ತು. ಹೀಗಾಗಿ ಹೊರಗಿನಿಂದ ಬಕೆಟ್‌ಗಳಲ್ಲಿ ನೀರು ತಂದು ಬಳಕೆ ಮಾಡಲಾಗುತ್ತಿತ್ತು. ಆದರೂ ನೀರಿನ ಬಿಲ್ ರೂಪದಲ್ಲಿ 16,919 ರೂ. ಪಾವತಿಸಲಾಗಿದೆ.

ವಸತಿ ನಿಲಯದಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಬಿರುಕು ಬಿಟ್ಟ ಶೌಚಾಲಯ, ಸೋರುತ್ತಿರುವ ಅಡುಗೆ ಕೋಣೆ, ಸ್ವಿಚ್ ಹಾಕಿದಾಗ ಶಾಕ್ ಹೊಡೆಯುವ ವಯರಿಂಗ್ ಅವ್ಯವಸ್ಥೆ, ಮುರಿದು ಬಿದ್ದ ಕಿಟಿಕಿ ಗಳು ಹೀಗೆ ಹತ್ತು ಹಲವು ಸಮಸ್ಯೆಗಳು ಇಲ್ಲಿವೆ. ತ್ಯಾಜ್ಯ ಸಂಸ್ಕರಣೆಗೆ ವ್ಯವಸ್ಥೆ ಇಲ್ಲದೆ ಇರುವುದರಿಂದ ಸೊಳ್ಳೆಗಳ ಕಾಟ ತೀವ್ರಗೊಂಡಿದೆ. ಅಡುಗೆ ಕೋಣೆಯಲ್ಲಿ ಮಿಕ್ಸಿ, ಗ್ರೈಂಡರ್ ಮೊದಲಾದವುಗಳು ಕೆಟ್ಟು ಹೋಗಿದೆ. ವಸತಿ ನಿಲಯದ ಗೇಟ್ ಬಳಿ ವಿದ್ಯುತ್ ದೀಪ ಇಲ್ಲ. ಆದರೂ ಬಾಡಿಗೆ ದರವನ್ನು ಮಾತ್ರ ಏರಿಸಲಾಗುತ್ತಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಉದ್ಯೋಗ ಮಾಡಲು ಸಾಧ್ಯವಾಗದ ಸ್ಥಿತಿ ತಲೆದೋರಿದೆ. ಸೌಲಭ್ಯ ಕಲ್ಪಿಸಿ ಬಾಡಿಗೆ ಏರಿಕೆ ಮಾಡುತ್ತಿದ್ದಲ್ಲಿ ಸಮಸ್ಯೆ ತಲೆದೋರುತ್ತಿರಲಿಲ್ಲ. ಆದರೆ ಸೂಕ್ತ ಸೌಲಭ್ಯಗಳಿಲ್ಲದೆ ಬಾಡಿಗೆ ಹೆಚ್ಚಳ ವಸತಿ ನಿಲಯದ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News