2017ಕ್ಕೆ ಸಂಪೂರ್ಣ ವಿದ್ಯುದ್ದೀಕರಣಗೊಂಡ ಜಿಲ್ಲೆಯಾಗಲಿದೆ ಕಾಸರಗೋಡು
ಕಾಸರಗೋಡು, ಸೆ.25: ಕೇರಳ ಸರಕಾರ ಸಂಪೂರ್ಣ ವಿದ್ಯುದ್ದೀಕರಣಕ್ಕೆ ಹೆಜ್ಜೆ ಮುಂದಿಟ್ಟಿದೆ. ಪ್ರತಿಯೊಂದು ಮನೆಗೂ ವಿದ್ಯುತ್ ತಲುಪಿಸಬೇಕು ಎಂಬ ಗುರಿ ಹೊಂದಿದೆ. ಆದರೆ ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿ 7,957 ಮಂದಿ ಕಾಯುತ್ತಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತಿದೆ.
2017 ರಲ್ಲಿ ಜಿಲ್ಲೆಯನ್ನು ಸಂಪೂರ್ಣ ವಿದ್ಯುದ್ದೀಕರಣಗೊಂಡ ಜಿಲ್ಲೆ ಎಂದು ಘೋಷಿಸಲು ಸರಕಾರ ಮುಂದಾಗಿದೆ. ಈ ಹಿನ್ನಲೆಯಲ್ಲಿ ನಡೆಸಿದ ಸಮೀಕ್ಷೆಯಂತೆ 7,957 ವಿದ್ಯುತ್ ಸಂಪರ್ಕ ಲಭಿಸಬೇಕಿದೆ.
ಭೀಮನಡಿ ಸೆಕ್ಷನ್ ವ್ಯಾಪ್ತಿಯಲ್ಲಿ ಅತ್ಯಧಿಕ ಅಂದರೆ 836, ರಾಜಾಪುರದಲ್ಲಿ 776 ಹಾಗೂ ಪಡನ್ನಕಾಡು ಸೆಕ್ಷನ್ ವ್ಯಾಪ್ತಿಯಲ್ಲಿ ಕನಿಷ್ಠ 28 ಮಂದಿ ಫಲಾನುಭವಿಗಳಿಗೆ ಸಂಪರ್ಕ ಲಭಿಸಬೇಕಿದೆ. ಅರ್ಜಿಗಳನ್ನು ಸೂಕ್ಷ್ಮ ಪರಿಶೀಲನೆಗೊಳಪಡಿಸಿ ವರದಿ ನೀಡುವಂತೆ ಹಿರಿಯ ಅಧಿಕಾರಿಗಳು ಆದೇಶ ನೀಡಿದ್ದಾರೆ. ಈ ಪೈಕಿ 1,555 ಸಂಪರ್ಕಗಳಿಗೆ ವಿದ್ಯುತ್‌ಕಂಬ ಅಗತ್ಯ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2,578 ಮನೆಗಳಿಗೆ ಸಂಪರ್ಕ ಒದಗಿಸಲು ಅಂದಾಜು ಪಟ್ಟಿ ತಯಾರಿಸಲಾಗಿದೆ. ಬಿಪಿಎಲ್ ಕುಟುಂಬಗಳಿಗೆ ಸಂಪರ್ಕ ನೀಡಲು 4,21,17, 444 ರೂ.ವನ್ನು ವಿದ್ಯುನ್ಮಂಡಳಿ ಪಾವತಿಸಲಿದೆ. ಭೀಮನಡಿ ಸೆಕ್ಷನ್ ವ್ಯಾಪ್ತಿಯಲ್ಲಿ ಅತ್ಯಧಿಕ ಪರಿಶಿಷ್ಟ ಸಮುದಾಯದ ಮನೆಗಳಿದ್ದು ಈ ಮನೆಗಳಿಗೆ ಶೀಘ್ರ ಸಂಪರ್ಕ ಲಭಿಸಲಿದೆ.
ಕಾಸರಗೋಡಿನ 38, ನೆಲ್ಲಿಕುಂಜೆಯ 95, ಕುಂಬಳೆಯ 232, ಉಪ್ಪಳದ 51, ಮಂಜೇಶ್ವರದ 101 , ಪೈವಳಿಕೆಯ 108, ಚೆರ್ಕಳದ 186, ಬದಿಯಡ್ಕದ 251, ಮುಳ್ಳೇರಿಯಾದ 576, ಪೆರಿಯಾದ 237, ಉದುಮದ 116, ಚಟ್ಟಂಚಾಲ್‌ನ 122, ಕುತ್ತಿಕೋಲ್‌ನ 776, ಕಯ್ಯುರುವಿನ 187, ತ್ರಿಕ್ಕರಿಪುರದ 143, ಪಡನ್ನದ 77, ಪಿಲಿಕ್ಕೋಡುವಿನ 64, ರಾಜಾಪುರದ 781, ಬಲಂತೋಡುವಿನ 224, ಕಾಞಂಗಾಡ್‌ನ 64, ನೆಲ್ಲಪುಯ 306, ಭೀಮನಡಿಯ 836, ಪಡನ್ನಕಾಡುವಿನ 28, ಮಾವುಂಗಾಲ್‌ನ 492, ಪೊಯ್ಯಕಂಡದ 275, ಚಿತ್ತಾರಿಯ 146 , ಪೆರಿಯ ಬಜಾರ್‌ನ 346, ನೀಲೇಶ್ವರದ 180 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಲಭಿಸಲಿದೆ.