"ಮೋದಿಯನ್ನು ಬಿತ್ತಿ ಮನಮೋಹನ್‌ರನ್ನು ಬೆಳೆದಂತಾಗಿದೆ"

Update: 2016-09-25 09:05 GMT

ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದಾಗ ನರೇಂದ್ರ ಮೋದಿ ಭಾರತದ ವಿದೇಶಿ ನೀತಿ ವಿಚಾರವಾಗಿ ಪ್ರಧಾನಿ ಮನಮೋಹನ್ ಸಿಂಗ್ ಬಹಳ ದುರ್ಬಲ ಮತ್ತು ನಿರ್ಧಾರ ಕೈಗೊಳ್ಳದ ವ್ಯಕ್ತಿಯೆಂದು ಟೀಕಿಸಿದ್ದರು. ಡೂಬ್ ಮರೋ, ಒಬಾಮ ಒಬಾಮ, ಪಾಕಿಸ್ತಾನ ಜಾವೋ ನಾ, ಪಾಕಿಸ್ತಾನ್ ಕೋ ಪಾಕಿಸ್ತಾನ್ ಕಿ ಭಾಷಾ ಮೇ ಜವಾಬ್ ದೇನಾ ಚಾಹಿಯೆ ಮೊದಲಾದ ವಾಕ್ಯಗಳು ಅವರ ಭಾಷಣದ ಅವಿಭಾಜ್ಯ ಅಂಗವಾಗಿದ್ದವು. ಆದರೆ ಇವು ತೋರಿಕೆಯ ಮಾತಾಗಿದ್ದರೂ ಅವರ ಕಟ್ಟಾ ಬೆಂಬಲಿಗರು ಮತ್ತು ಕೆಲವು ತಟಸ್ಥರಿಗೂ ಭಾರತ ಕೊನೆಗೂ ಮೋದಿಯಲ್ಲಿ ಬಲಿಷ್ಠ ನಾಯಕನನ್ನು ಕಂಡಿದೆ ಎನ್ನುವ ಭಾವನೆ ತಂದಿತ್ತು. ಹೀಗಾಗಿ ಸುಮಾರು ಶೇಕಡಾ 30ರ ಕ್ಕೂ ಅಧಿಕ ಪ್ರಮಾಣದಲ್ಲಿ ಭಾರತೀಯರು ಅವರಿಗೆ ಮತ ಹಾಕಿ 2014 ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ನೀಡಿದ್ದಾರೆ. ಆದರೆ ಶೀಘ್ರವೇ ಮೋದಿಯ ಚುನಾವಣಾ ಭರವಸೆಗಳು ಮತ್ತು ರಾಜಕೀಯ ನಿಲುವು ಎಲ್ಲವೂ ಸತ್ಯಕ್ಕೆ ದೂರ ಎನ್ನುವುದು ತಿಳಿದು ಬಂತು. ಪಕ್ಷದ ಅವರ ಸಹೋದ್ಯೋಗಿಗಳೇ ಚುನಾವಣಾ ಭರವಸೆಗಳನ್ನು ಅವಾಸ್ತವ ಮತ್ತು ಜುಮ್ಲಾ ಎಂದು ಕರೆದರು.

ಭಾರತದ ಹೆಚ್ಚು ಆಪ್ತವಲ್ಲದ ನೆರೆದೇಶ ಪಾಕಿಸ್ತಾನದ ವಿಷಯದಲ್ಲಿ ಮೋದಿ ಯು ಟರ್ನ್ ಹೊಡೆಯುತ್ತಲೇ ಹೋದರು. ಆದರೆ ಅವರ ಕಟ್ಟಾ ಬೆಂಬಲಿಗರು ಭರವಸೆ ಕಳೆದುಕೊಂಡಿರಲಿಲ್ಲ. 56 ಇಂಚ್ ಎದೆಯುಳ್ಳ ವ್ಯಕ್ತಿಯೆಂದೇ ಕರೆಯಲಾಗಿರುವ ಮೋದಿ ಪಾಕಿಸ್ತಾನಕ್ಕೆ ಪಾಠ ಕಲಿಸುವ ನಂಬಿಕೆ ಅವರಲ್ಲಿತ್ತು. ಮೋದಿಯ ಟೀಕಾಕಾರರು ಅವರನ್ನು ಕಾಗದದ ಹುಲಿ ಎಂದು ಬಹಳ ಹಿಂದೆಯೇ ಹೇಳಿದ್ದರೆ, ಉರಿ ದಾಳಿಯಲ್ಲಿ 18 ಮಂದಿ ಭಾರತೀಯ ಸೈನಿಕರು ಮರಣ ಹೊಂದಿದ ಮೇಲೆ ಭಕ್ತ ಎಂದೇ ಕರೆಸಿಕೊಳ್ಳುವ ಅವರ ಬೆಂಬಲಿಗರು ಕೂಡ ನಿರಾಶೆ ಹೊಂದಿದ್ದಾರೆ. ಇದಾಗಿ ಕೆಲವು ದಿನಗಳ ಬಳಿಕ ಈಗ ಮೋದಿ ಮಾತನಾಡಿದ್ದಾರೆ. ಅವರೇನೂ ಯುದ್ಧಕ್ಕೆ ಕರೆಕೊಡಲಿಲ್ಲ. ಆದರೆ ಪಾಕಿಸ್ತಾನಕ್ಕೆ ಪಾಠ ಹೇಳಿದ್ದಾರೆ. ಯುದ್ಧ ಎಂದರೆ ಸೇನಾ ಯುದ್ಧವಲ್ಲ, ಬಡತನದ ವಿರುದ್ಧ, ಅಪೌಷ್ಠಿಕತೆ ಮತ್ತು ನಿರುದ್ಯೋಗದ ವಿರುದ್ಧ ಯುದ್ಧ ಮಾಡುವಂತೆ ಹೇಳಿದ್ದಾರೆ.

ಕೋಯಿಕ್ಕೋಡ್‌ನಲ್ಲಿ ಮೋದಿ ಮಾಡಿರುವ ಭಾಷಣ ಠುಸ್ ಪಟಾಕಿಯಾಗಿದೆ. ತಟಸ್ಥರು ಅವರ ಮಾತುಗಳನ್ನು ಕೇಳಿ ಕೊನೆಗೂ ಮೋದಿ ವಿದೇಶಿ ನೀತಿಯ ಪಾಠ ಕಲಿತಿದ್ದಾರೆ, ವಿಪಕ್ಷದಲ್ಲಿರುವಾಗ ಸುಖಾ ಸುಮ್ಮನೆ ಎದೆ ತಟ್ಟಿಕೊಳ್ಳುವ ಅಗತ್ಯವಿರಲಿಲ್ಲ ಎಂದು ಮೋದಿ ಅರ್ಥ ಮಾಡಿಕೊಂಡರು ಎಂದು ಸಮಾಧಾನಪಟ್ಟಿದ್ದಾರೆ. ಆದರೆ ಅವರ ಬೆಂಬಲಿಗರು ಮಾತ್ರ ಹತಾಶರಾಗಿದ್ದಾರೆ. ಫೇಸ್‌ಬುಕ್‌ನಲ್ಲಿ ಹತಾಶೆಯಿಂದ ಬರೆದ ಈ ಪತ್ರವೇ ಅದಕ್ಕೆ ಸಾಕ್ಷಿ,

"ಮೋದಿ ತಾನು ಉತ್ತಮವಾಗಿ ಮಾಡಬಲ್ಲ ಕೆಲಸವನ್ನೇ ಮಾಡಿದ್ದಾರೆ, ಮತ್ತೊಂದು ಉತ್ತಮ ಭಾಷಣ ಮಾಡಿದ್ದಾರೆ. ನೇರವಾಗಿ ಪಾಕಿಸ್ತಾನದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ ಮತ್ತು ಅವರ ನಾಯಕತ್ವದ ಹುಳುಕನ್ನು ಎತ್ತಿಹಿಡಿದಿದ್ದಾರೆ. ಆದರೆ ಪ್ರಧಾನಿಯವರೇ, ಈ ನಿಮ್ಮ ಪರಾಕ್ರಮದಿಂದ ಭಾರತೀಯರು ಏನು ಅರ್ಥ ಮಾಡಿಕೊಳ್ಳಬೇಕು? ಬರೀ ಮಾತುಗಳಿಂದ ಪ್ರಯೋಜನವಿಲ್ಲ. ನಮ್ಮ ದಿಟ್ಟ ಸೈನಿಕರ ಮರಣಕ್ಕೆ ತಕ್ಕ ಶಾಸ್ತಿ ಮಾಡಬೇಕಿದ್ದಲ್ಲಿ ಲೆಕ್ಕಾಚಾರದ ಕ್ರಮ ಅಗತ್ಯವಿದೆ. ಅಲ್ಲಿವರೆಗೆ ಭಾರತ ಸುಮ್ಮನಿರದು. ಅವರ ಆಕ್ರೋಶ ತಣ್ಣಗಾಗದು. ಆ ಆಕ್ರೋಶ ನಿಮ್ಮ ಅಸಾಮರ್ಥ್ಯದ ಕಡೆಗೆ ತಿರುಗುವ ಬದಲಾಗಿ, ಶತ್ರುವಿನ ಕಡೆಗೆ ಹೋಗುವಂತೆ ನಿಮ್ಮ ಕಾರ್ಯಗಳಿಂದ ಖಚಿತಪಡಿಸಿ. ನಾವು ಕಾಯುತ್ತಿದ್ದೇವೆ" ಎಂದು ಒಬ್ಬರು ಬರೆದಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ನರೇಂದ್ರ ಮೋದಿ ಕುರಿತ ಟೀಕೆಗಳು ಮತ್ತು ಹಾಸ್ಯಗಳಿಂದ ತುಂಬಿ ಹೋಗಿದ್ದು ನಿರೀಕ್ಷಿತವೇ. ಪ್ರತೀಕ್ ಸಿನ್ಹಾ ಈ ಹತಾಶೆಗೆ ಉರಿ ಹಚ್ಚುವ ಪೋಸ್ಟ್ ಹಾಕಿದ್ದಾರೆ, "ಭಕ್ತರೇ ಭಾಷಣ ಹೇಗನಿಸಿದೆ? ಒಂದು ತಲೆಯ ಬದಲಿಗೆ ಹತ್ತು ತಲೆ ತರುವರೇ ಮೋದಿ? ಇಲ್ಲವಲ್ಲ? ಮೋದಿಯನ್ನು ಬಿತ್ತಿ ಮನಮೋಹನ್ ಪಡೆದಿರಿ" ಎಂದಿದ್ದಾರೆ.

ಸುಬ್ರಹ್ಮಣ್ಯಂ ಸ್ವಾಮಿ ಹೆಸರಲ್ಲಿ ನಕಲಿ ಖಾತೆ ಹೊಂದಿರುವ ವ್ಯಕ್ತಿಯಂತು, "ಕೇರಳದಲ್ಲಿ ಬಿಜೆಪಿ ವೇದಿಕೆಯಿಂದ ಮೊದಲ ಸಾರ್ವಜನಿಕ ಟೀಕೆಗಳನ್ನು ಉರಿ ಬಗ್ಗೆ ಮಾಡಿರುವುದು ನೋಡಿದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪಾಕಿಸ್ತಾನದ ಜನರನ್ನು ಉದ್ದೇಶಿಸಿ ಮಾತನಾಡಿದ ಹಾಗಿತ್ತು. ಬಡತನದ ವಿರುದ್ಧ ಯುದ್ಧ ಮಾಡಿ ಎಂದಿದ್ದಾರೆ ಮೋದಿ. ಯುದ್ಧಕ್ಕಾಗಿ ಹಾತೊರೆಯುತ್ತಿರುವ ಸುದ್ದಿ ವಾಹಿನಿಗಳು ಮತ್ತ ಭಕ್ತರ ಮುಖಕ್ಕೆ ಇಂತಹ ಏಟು ಹೊಡೆದಿದ್ದಕ್ಕೆ ಧನ್ಯವಾದ ಪ್ರಧಾನಿ ಮೋದಿ" ಎಂದು ಬರೆದಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಬಹುತೇಕರದ್ದು ಇದೇ ಅಭಿಪ್ರಾಯವಾಗಿತ್ತು.

ಇಮ್ರಾನ್ ಅಲಿ: ಮನಮೋಹನ್ ಎರಡು ಅವಧಿಗೆ ಅಧಿಕಾರಕ್ಕೆ ಬಂದರೂ ಒಮ್ಮೆಯೂ ಪಾಕಿಸ್ತಾನಕ್ಕೆ ಹೋಗಲಿಲ್ಲ. ತಮ್ಮ ತತ್ವಗಳಲ್ಲಿ ನಂಬಿಕೆ ಇಟ್ಟಿದ್ದರು. ಭಯೋತ್ಪಾದನೆ ಮತ್ತು ಮಾತುಕತೆ ಜೊತೆ ಜೊತೆಯಾಗಿ ಹೋಗದು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ನಮ್ಮ ಮೋದಿಜಿ... ಹ್ಹ ಹ್ಹ ಹ್ಹ

ಮನವೇಂದ್ರ ಭಂಗುಯಿ: ಅಯ್ಯೋ ದೇವರೆ. ಪಾಕಿಸ್ತಾನಿಗಳ ಬಗ್ಗೆ ದಯೆ ಬರುತ್ತಿದೆ. ಈಗ ಅವರು ತಮ್ಮ ಪ್ಯಾಂಟು ಒದ್ದೆ ಮಾಡಿಕೊಂಡಿರಬಹುದು.

ಅಲೋಕ್ ಜಗಧಾರಿ: ಅವರು ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್‌ನಿಂದ ಚುನಾವಣೆಗೆ ನಿಲ್ಲಲಿದ್ದಾರೆ ಎಂದು ಯಾರು ಸುದ್ದಿ ಹರಡುತ್ತಿದ್ದಾರೆ?

ಅಜಿತ್ ಖುರಾನ: ಇಂತಹ ಶ್ರೇಷ್ಠ ಪ್ರಧಾನಿ ಮೋದಿ ಜೊತೆಗೆ ಹೋಲಿಸಿ ದಯವಿಟ್ಟು ಎಂಎಂಎಸ್ ಗೆ ಅವಹೇಳನ ಮಾಡಬೇಡಿ.

ಕೃಪೆ: http://www.jantakareporter.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News