ಜ್ಞಾನ-ತಂತ್ರಜ್ಞಾನ ಒಂದೆಡೆ ಸೇರಿದರೆ ಪರಿಪೂರ್ಣತೆ ಸಾಧ್ಯ: ಪ್ರೊ.ಬಿ.ಎ.ವಿವೇಕ್ ರೈ
ಕೊಣಾಜೆ, ಸೆ.25: ನಮಗೆ ದೊರೆತ ಮಾಹಿತಿಯನ್ನು ಪ್ರಶ್ನಿಸಿ ಪರಾಮರ್ಶೆಗೊಳಪಡಿಸಿದರೆ ನಮ್ಮ ಜ್ಞಾನದ ವಿಸ್ತಾರದ ಜೊತೆಗೆ ನೈಜತೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇಂದಿನ ಕಾಲಘಟ್ಟದಲ್ಲಿ ಅಧ್ಯಯನಕ್ಕೆ ಪೂರಕವಾಗಿ ಹಲವಾರು ತಂತ್ರಜ್ಞಾನಗಳು ಹುಟ್ಟಿಕೊಂಡಿದ್ದು, ಜ್ಞಾನ ಮತ್ತು ತಂತ್ರಜ್ಞಾನ ಒಂದೆಡೆ ಸೇರಿದರೆ ಪರಿಪೂರ್ಣತೆಯನ್ನು ಬೆಳೆಸಿಕೊಳ್ಳಲು ಸಾದ್ಯವಾಗುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ್ ರೈ ಅವರು ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ರವಿವಾರ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಹಳೆವಿದ್ಯಾರ್ಥಿಗಳ ಒಕ್ಕೂಟ ಗಿಳಿವಿಂಡು ವತಿಯಿಂದ ನಡೆದ ‘ಗಿಳಿವಿಂಡು ಕಲರವ’-2ನೆ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ನಮ್ಮಲ್ಲಿ ವೈಚಾರಿಕತೆ ಎನ್ನುವುದು ಬದುಕಿನಿಂದ ಮತ್ತು ಗ್ರಂಥದಿಂದ ಬರುವಂತಹದ್ದು. ಅಧ್ಯಾಪನ ವೃತ್ತಿ ಅದೊಂದು ಶಕ್ತಿ ಇದ್ದ ಹಾಗೆ. ನನ್ನ ಜೀವನದಲ್ಲಿ ಅಧ್ಯಾಪನ ವೃತ್ತಿಯಲ್ಲಿ ತೊಡಗಿಕೊಂಡನಂತರ ಹಲವಾರು ರೀತಿಯ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಯಿತು. ಈ ಅಧ್ಯಾಪನ ವೃತ್ತಿಗೆ ಬರದೇ ಇದ್ದರೆ ಬೌದ್ಧಿಕವಾಗಿ ನಾನು ಬೆಳೆಯಲು ಖಂಡಿತಾ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ ಅವರು ಮಂಗಳೂರು ವಿ.ವಿ.ಯಲ್ಲಿ ಕಳೆದ ಅವಿಸ್ಮರಣೀಯ ಕ್ಷಣಗಳನ್ನು ನೆನಪಿಸಿಕೊಂಡರು. ಅಲ್ಲದೆ ಗಿಳಿವಿಂಡು ಸಮಾವೇಶದಂತಹ ಕಾರ್ಯಕ್ರಮದಿಂದ ಹಳೆವಿದ್ಯಾರ್ಥಿಗಳ ಜೊತೆಗಿನ ಸಮಾಗಮದೊಂದಿಗೆ ಹೊಸತನವನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿ.ವಿ. ಕುಲಪತಿ ಪ್ರೊ.ಕೆ.ಬೈರಪ್ಪ, ಕನ್ನಡ ಅಧ್ಯಯನ ಸಂಸ್ಥೆಗೆ ಪರಮೇಶ್ವರ ಭಟ್ಟ ಅವರ ಕೊಡುಗೆ ಅಪಾರವಾದದ್ದು. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಇದೀಗ ಗಿಳಿವಿಂಡು ಸಂಘವನ್ನು ಕಟ್ಟಕೊಂಡು ಹಲವಾರು ಕಾರ್ಯಕ್ರಮಗಳೊಂದಿಗೆ ಜ್ಞಾನದ ಕೊಂಡಿಯನ್ನು ವಿಸ್ತರಿಸುತ್ತಿದ್ದಾರೆ. ಇಂತಹ ಒಕ್ಕೂಟ ಪ್ರತಿಯೊಂದು ವಿಭಾಗದಲ್ಲೂ ಸ್ಥಾಪನೆಯಾಗಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ಅವರು, ಹಿಂದೆ ವಿದ್ಯಾರ್ಥಿಗಳ ರ್ಯಾಂಕ್‌ಗಳ ಆಧಾರದಲ್ಲಿ ಶಿಕ್ಷಣ ಸಂಸ್ಥೆಗಳ ವೌಲ್ಯವನ್ನು ಅಳೆಯಲಾಗುತ್ತಿತ್ತು. ಆದರೆ ಈಗಿನ ಕಾಲಘಟ್ಟ ಹಾಗಿಲ್ಲ. ಇದೀಗ ವಿದ್ಯಾರ್ಥಿಗಳ ಜೊತೆಗೆ ಅಧ್ಯಾಪಕರನ್ನು ವೌಲ್ಯಮಾಪನ ಮಾಡಲಾಗುತ್ತಿದೆ. ಆದ್ದರಿಂದ ನಮ್ಮಲ್ಲಿರುವ ವೌಲ್ಯಗಳು ಪ್ರಧಾನ ಪಾತ್ರ ವಹಿಸುತ್ತದೆ ಅಲ್ಲದೆ ಅನುಭವ, ಕನಸು ಮತ್ತು ನೆನಪು ನಮ್ಮ ಜೀವನದಲ್ಲಿ ಪ್ರಮುಖವಾದ ಅಂಶವಾಗಿವೆ. ಹಳೆ ವಿದ್ಯಾರ್ಥಿಗಳ ಸಮಾಗಮದೊಂದಿಗೆ ಜ್ಞಾನವನ್ನು ಅರಿತುಕೊಳ್ಳುವ ಕೆಲಸದೊಂದಿಗೆ ಹೃದಯ ಕೇಂದ್ರಿತ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಗಿಳಿವಿಂಡು ಕಾರ್ಯಕ್ರಮ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊ.ಬಿ.ಎ.ವಿವೇಕ್ ರೈ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್‌ವಿಪಿ ಕನ್ನಡ ಅಧ್ಯಯನ ವಿಭಾಗದ 2016-17ನೆ ಭಿತ್ತಿ ಪತ್ರಿಕೆಯ ಆವೃತ್ತಿಯನ್ನು ಬಿಡುಗಡೆಗೊಳಿಸಲಾಯಿತು.
ಸಮಾರಂಭದಲ್ಲಿ ಮಂಗಳೂರು ವಿ.ವಿ. ಕುಲಸಚಿವ ಪ್ರೊ.ಲೋಕೇಶ್ ಉಪಸ್ಥಿತರಿದ್ದರು. ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಶಿವರಾಮ ಶೆಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಡಾ.ನಾಗಪ್ಪಗೌಡ ವಂದಿಸಿದರು. ಕನ್ನಡ ಅಧ್ಯಯನ ವಿಭಾಗದ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.