ಬಿಜೆಪಿಯಿಂದ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ: ಐವನ್ ಡಿಸೋಜ
ಮಂಗಳೂರು, ಸೆ.25: ಕೇಂದ್ರ ಸರಕಾರ ಮತ್ತು ರಾಜ್ಯ ಬಿಜೆಪಿ ನಾಯಕರು ಕಾವೇರಿ ನದಿ ಬಿಕ್ಕಟ್ಟಿಗೆ ಸಂಬಂಧಿಸಿ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಧಾನಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ ಸದಸ್ಯರು ಮತ್ತು ರಾಜ್ಯದಿಂದ ಆಯ್ಕೆಯಾದ ಕೇಂದ್ರ ಮಂತ್ರಿಗಳು ಪ್ರಧಾನಿ ಮನವೊಲಿಸಲು ವಿಲರಾಗಿದ್ದಾರೆ. ಈ ಮೂಲಕ ರಾಜ್ಯ ಸರಕಾರದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದರು.
ಕೇಂದ್ರ ಸರಕಾರವೇ ಮಧ್ಯಪ್ರವೇಶಿಸಬೇಕೆಂಬುದು ರಾಜ್ಯದ ಜನರ ಆಗ್ರಹವಾಗಿದೆ. ಆದರೆ ರಾಜ್ಯದ ಬಿಜೆಪಿ ಜನಪ್ರತಿನಿಧಿಗಳು ಮೋದಿ ಮಧ್ಯಪ್ರವೇಶಿಸಲ್ಲ ಎಂದಿದ್ದಾರೆ. ಸ್ವತ: ಮೋದಿಯವರು ಕೂಡಾ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿಲ್ಲ. ಹೀಗಾಗಿ ಇದು ರಾಜ್ಯ ಬಿಜೆಪಿಯವರಿಗೆ ಹೇಗೆ ಗೊತ್ತಾಗಿದೆ ಎಂಬುದು ನಮ್ಮ ಪ್ರಶ್ನೆಯಾಗಿದೆ. ಪ್ರಧಾನಿಯವರಿಗೆ ರಾಜ್ಯದ ಜನತೆ ಬಗ್ಗೆ ಕಾಳಜಿಯಿಲ್ಲ. ಪ್ರಧಾನಿ ಮೋದಿ ಅವರ ವೌನ ನಡೆ ಮತ್ತು ಬಿಜೆಪಿ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸಿದ್ದು ಅನುಮಾನ ಮೂಡಿಸಿದೆ. ಈ ಮೂಲಕ ರಾಜಕೀಯ ಲಾಭಕ್ಕೆ ಹವಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯಕ್ಕೆ ಘೋರ ಪರಿಸ್ಥಿತಿ ಬಂದಾಗ ಸಮಸ್ಯೆ ಬಗ್ಗೆ ಮೋದಿ ಮಧ್ಯಸ್ಥಿಕೆ ವಹಿಸಬೇಕಿತ್ತು. ಮುಖ್ಯಮಂತ್ರಿಗಳು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರನ್ನು ಭೇಟಿಯಾಗಿದ್ದರೂ ವೌನವಾಗಿದ್ದಾರೆ. ಕಾವೇರಿಯ ಜ್ವಲಂತ ಸಮಸ್ಯೆ ಕುರಿತು ಚರ್ಚಿಸಲು ಪ್ರಧಾನಿಮಂತ್ರಿ ಮೋದಿ ಅವರಿಗೆ ಇದುವರೆಗೆ 8 ಬಾರಿ ಮುಖ್ಯಮಂತ್ರಿಗಳು ಪತ್ರ ಬರೆದಿದ್ದರೂ ಭೇಟಿಗೆ ಅವಕಾಶವನ್ನೇ ನೀಡಿಲ್ಲ ಎಂದರೆ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕೇಂದ್ರದ 3 ಸಂಪುಟ ದರ್ಜೆಯ ಮಂತ್ರಿಗಳು, 18 ಮಂದಿ ಸಂಸತ್ ಸದಸ್ಯರುಗಳಿದ್ದರೂ ರಾಜ್ಯದ ಕಾವೇರಿ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಅವರಿಗೆ ಪ್ರಧಾನಿ ಮೋದಿ ಅವರ ಬಳಿ ಸುಳಿಯಲು ಭಯ. ಪ್ರಧಾನಿ ಮೋದಿ ಅವರು ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳುವ ಮೂಲಕ ಸಮ್ಮತಿಸುತ್ತಿದ್ದಾರೆ ಎಂದು ನುಡಿದರು.
ಪ್ರಧಾನಿ ಬಲೂಚಿಸ್ಥಾನದ ಪರಿಹಾರಕ್ಕೆ ಮುಂದಾಗುತ್ತಾರೆ. ಕರೆಯದೆ ಪಾಕ್‌ಗೆ ಬಿರಿಯಾನಿ ಊಟಕ್ಕೆ ಹೋಗುತ್ತಾರೆ. ಆದರೆ ಭಾರತದೊಳಗಿನ ಸಮಸ್ಯೆ ಪರಿಹಾರ ಅವರಿಗೆ ಸಾಧ್ಯವಿಲ್ಲ ಎಂಬುದಾಗಿ ಜನಸಾಮಾನ್ಯರು ಮಾತನಾಡುತ್ತಾರೆ ಎಂದು ಟೀಕಿಸಿದರು.
ಸುಪ್ರೀಂಕೋರ್ಟ್ ಆದೇಶ ರಾಜ್ಯದ ಜನತೆಯ ಪಾಲಿನ ಮರಣಶಾಸನವಾಗಿದೆ. ಕಾವೇರಿ ತೀರ್ಪಿಗೆ ಸಂಬಂಧಿಸಿ ಕಾವೇರಿ ಸಮಸ್ಯೆಯನ್ನು ಬಿಂಬಿಸುವಲ್ಲ್ಲಿ ರಾಜ್ಯ ಸರಕಾರದಿಂದ ವೈಲ್ಯವಾಗಿಲ್ಲ. ವಕೀಲ ನಾರಿಮನ್ ರಾಜ್ಯದ ಪರವಾಗಿ ಸಾಕಷ್ಟು ಅಧ್ಯಯನ ಮಾಡಿದವರು. ಆದರೆ ಕೋರ್ಟ್ ತೀರ್ಪು ಮಾತ್ರ ನಮ್ಮ ಪರವಾಗಿಲ್ಲದಿರುವುದು ದುರಾದೃಷ್ಟಕರ ಎಂದು ಹೇಳಿದರು.
ಮಂಗಳೂರು ನಗರ ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗಿರುವುದು ಸಂತೋಷದ ವಿಚಾರ. ಸ್ಮಾರ್ಟ್‌ಸಿಟಿ ಯೋಜನೆ ಅನುದಾನ, ಎಡಿಬಿ, ಅಮೃತ್ ಯೋಜನೆ, ಪಾಲಿಕೆ ಅನುದಾನ ಸಹಿತ ಒಟ್ಟು ಅಂದಾಜು 2,002 ಕೋಟಿ ರೂ.ಗಳನ್ನು ಬಳಸಿಕೊಂಡು ಮುಂದಿನ 5 ವರ್ಷದೊಳಗೆ ವ್ಯವಸ್ಥಿತ ಯೋಜನೆಗಳೊಂದಿಗೆ ನಗರ ಅಭಿವೃದ್ಧಿಗೊಳ್ಳಲಿದೆ. ಸ್ಮಾರ್ಟ್‌ಸಿಟಿಯ ಮೊದಲ ಅನುದಾನ ಬಿಡುಗಡೆಯಾದಂತೆ ನಗರದ ಚಿತ್ರಣ ಬದಲಾವಣೆಗೊಳ್ಳಲಿದೆ. ಸೋಲಾರ್ ಪಾರ್ಕ್ ನಿರ್ಮಾಣ ಮೂಲಕ ಇಡೀ ನಗರಕ್ಕೆ ವಿದ್ಯುಚ್ಚಕ್ತಿ ಪೂರೈಕೆ ಯೋಜನೆಗೆ ಹೆಚ್ಚು ಒತ್ತು ನೀಡಲು ಪ್ರಯತ್ನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಾಗೇಂದ್ರ ಕುಮಾರ್, ಪಿ.ಮನುರಾಜ್, ಭಾಸ್ಕರ್ ರಾವ್, ವಸಂತ ಶೆಟ್ಟಿ, ಸವದ್ ಗೂನಡ್ಕ, ಸ್ಟೀಫಸನ್ ಮರೋಳಿ, ನಝೀರ್ ಬಜಾಲ್ ಉಪಸ್ಥಿತರಿದ್ದರು.