ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದ ಅಶ್ವಿನ್

Update: 2016-09-25 12:14 GMT

ಕಾನ್ಪುರ, ಸೆ.25: ನ್ಯೂಝಿಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಐತಿಹಾಸಿಕ 500ನೆ ಟೆಸ್ಟ್ ಪಂದ್ಯದಲ್ಲಿ ಭಾರತದ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಮತ್ತೊಂದು ಮೈಲುಗಲ್ಲು ತಲುಪಿ ಪಂದ್ಯವನ್ನು ಸ್ಮರಣೀಯವಾಗಿರಿಸಿಕೊಂಡರು.

 ಪ್ರಥಮ ಟೆಸ್ಟ್‌ನ ನಾಲ್ಕನೆ ದಿನವಾದ ರವಿವಾರ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ವಿಕೆಟ್ ಉರುಳಿಸಿದ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಪೂರೈಸಿದರು. ಅತ್ಯಂತ ವೇಗವಾಗಿ 200 ವಿಕೆಟ್ ಪಡೆದ ವಿಶ್ವದ ಎರಡನೆ ಹಾಗೂ ಭಾರತದ ಮೊದಲ ಬೌಲರ್ ಎಂಬ ಕೀರ್ತಿಗೂ ಭಾಜನರಾದರು.

 ಮೊದಲ ಟೆಸ್ಟ್ ಗೆಲುವಿಗೆ 434 ರನ್ ಗುರಿ ಪಡೆದಿದ್ದ ನ್ಯೂಝಿಲೆಂಡ್‌ನ ಇಬ್ಬರು ಆರಂಭಿಕ ಆಟಗಾರರಾದ ಮಾರ್ಟಿನ್ ಗಪ್ಟಿಲ್ ಹಾಗೂ ಟಾಮ್ ಲಥಾಮ್‌ರನ್ನು ಒಂದೇ ಓವರ್‌ನಲ್ಲಿ ಪೆವಿಲಿಯನ್‌ಗೆ ಅಟ್ಟಿ ಆರಂಭಿಕ ಆಘಾತ ನೀಡಿದ ಅಶ್ವಿನ್ ನಾಯಕ ವಿಲಿಯಮ್ಸನ್(25)ರನ್ನು ಔಟ್ ಮಾಡಿ 200 ವಿಕೆಟ್ ಪೂರೈಸಿದರು.

ಅಶ್ವಿನ್ ತನ್ನ 37ನೆ ಪಂದ್ಯದಲ್ಲಿ 200 ವಿಕೆಟ್ ಪೂರೈಸಿದರು. ಹರ್ಭಜನ್ 46 ಪಂದ್ಯಗಳಲ್ಲಿ 200 ವಿಕೆಟ್ ಕ್ಲಬ್‌ಗೆ ಸೇರ್ಪಡೆಯಾಗಿದ್ದರು. ಅನಿಲ್ ಕುಂಬ್ಳೆ(47 ಪಂದ್ಯ)ಹಾಗೂ ಲೆಗ್ ಸ್ಪಿನ್ನರ್ ದಂತಕತೆ ಬಿಎಸ್ ಚಂದ್ರಶೇಖರ್(48) ವೇಗವಾಗಿ 200 ವಿಕೆಟ್ ಪೂರೈಸಿದ ಪಟ್ಟಿಯಲ್ಲಿ ಕ್ರಮವಾಗಿ 3ನೆ ಹಾಗೂ 4ನೆ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯದ ಸ್ಪಿನ್ನರ್ ಕ್ಲಾರ್ರಿ ಗ್ರಿಮ್ಮೆಟ್ (36 ಪಂದ್ಯ)ಅತ್ಯಂತ ವೇಗವಾಗಿ 200 ವಿಕೆಟ್ ಪೂರೈಸಿದ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯದ ಇನ್ನೋರ್ವ ಬೌಲರ್ ಡೆನ್ನಿಸ್ ಲಿಲ್ಲಿ ಹಾಗೂ ಪಾಕಿಸ್ತಾನದ ವೇಗದ ಬೌಲರ್ ವಕಾರ್ ಯೂನಿಸ್ ತಲಾ 38ನೆ ಟೆಸ್ಟ್‌ನಲ್ಲಿ ಅತ್ಯಂತ ವೇಗವಾಗಿ 200 ವಿಕೆಟ್ ಪೂರೈಸಿದ ಮೂರನೆ ಬೌಲರ್ ಆಗಿದ್ದಾರೆ.

ಅಶ್ವಿನ್ ಟೆಸ್ಟ್‌ನಲ್ಲಿ 200 ವಿಕೆಟ್ ಪಡೆದ ಭಾರತದ 9ನೆ ಬೌಲರ್ ಹಾಗೂ ದೇಶದ ಪರ ಗರಿಷ್ಠ ವಿಕೆಟ್ ಪಡೆದ 9ನೆ ಬೌಲರ್ ಎನಿಸಿಕೊಂಡರು. ಹಾಲಿ ಕೋಚ್ ಅನಿಲ್ ಕುಂಬ್ಳೆ(619) ಗರಿಷ್ಠ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News