×
Ad

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಹುದ್ದೆ ಭರ್ತಿಗೆ ಒತ್ತಾಯ

Update: 2016-09-25 18:37 IST

ಮಂಗಳೂರು, ಸೆ.25: ದಲಿತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ಘಟಕದಲ್ಲಿ ಖಾಲಿ ಇರುವ ಹುದ್ದೆಯನ್ನು ಶೀಘ್ರವೇ ಭರ್ತಿ ಮಾಡುವಂತೆ ಕರ್ನಾಟಕ ರಾಜ್ಯ ದಲಿತರ ಸಂಘರ್ಷ ಸುತಿಯ ಸದಸ್ಯ ನಿರ್ಮಲ್ ಕುಮಾರ್ ಅವರು ಇಂದು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ದಲಿತ ಕುಂದುಕೊರತೆ ಸಭೆಯಲ್ಲಿ ಒತ್ತಾಯಿಸಿದರು.

ಉಪ ಪೊಲೀಸ್ ಆಯುಕ್ತ ಕೆ.ಎಂ. ಶಾಂತರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಿಆರ್‌ಇ ಮಂಗಳೂರು ಘಟಕದಲ್ಲಿ ಎಸ್ಪಿ, ಡಿವೈಎಸ್ಪಿ, ಇನ್‌ಸ್ಪೆಕ್ಟರ್ ಹಾಗೂ ಕಾನ್‌ಸ್ಟೇಬಲ್ ಸೇರಿದಂತೆ ಬಹುತೇಕ ಹುದ್ದೆಗಳು ಖಾಲಿಯಿವೆ. ಒಬ್ಬರೇ ಇನ್‌ಸ್ಪೆಕ್ಟರ್ ಈ ಘಟಕವನ್ನು ಈಗ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗೆ ಸಂಬಂಧ ಪಟ್ಟಿರುವ ನಿರ್ದೇಶನಾಲಯ ಆಗಿರುವುದರಿಂದ ದೌರ್ಜನ್ಯ ಪ್ರಕರಣಗಳ ತನಿಖೆ ವಿಳಂಬವಾಗುತ್ತಿದೆ. ಈ ನಿಟ್ಟಿನಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡುವಂತೆ ಆಗ್ರಹಿಸಿದರು.

ಈ ಬಗ್ಗೆ ಉತ್ತರಿಸಿದ ಡಿಸಿಪಿ ಶಾಂತರಾಜು ಅವರು ಈ ವಿಷಯದ ಬಗ್ಗೆ ಈಗಾಗಲೇ 2 ಬಾರಿ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು. ಇದೇ ವಿಷಯಕ್ಕೆ ಸಂಬಂಧಿಸಿ ಸ್ಥಳದಲ್ಲೇ ನೀಡಿದ ಮನವಿಯನ್ನು ಸ್ವೀಕರಿಸಿದ ಡಿಸಿಪಿ ಶಾಂತರಾಜು, ಸೆ.29ರಂದು ಜಿಲ್ಲಾ ಮಟ್ಟದ ಜಾಗೃತಿ ಸಮಿತಿಯ ಸಭೆ ನಡೆಯಲಿದೆ. ಆ ಸಭೆಯ ಮುಂದಿಟ್ಟು ನಿರ್ಣಯ ಕೈಗೊಂಡು ಈ ಬಗ್ಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗುವುದು ಎಂದರು.

ನಗರದ ಕೆಲವೊಂದು ಅಂಗಡಿ ಮುಂಗಟ್ಟುಗಳಲ್ಲಿ ದಲಿತರ ಮಕ್ಕಳನ್ನು ದುಡಿಸಿಕೊಳ್ಳುತ್ತಿದ್ದಾರೆ. ಹಬ್ಬ ಹರಿದಿನಗಳ ಸಂದರ್ಭ ವೇಷ ಹಾಕಿಕೊಂಡು ದಲಿತರನ್ನು ಕೀಳಾಗಿ ಚಿತ್ರಿಸುವ ಕೆಲಸವಾಗುತ್ತದೆ. ಇದಕ್ಕೆ ನಿಯಂತ್ರಣ ಹಾಕುವ ನಿಟ್ಟಿನಲ್ಲಿ ಇಲಾಖೆಯ ವತಿಯಿಂದ ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡ ರಘುವೀರ್ ಸಭೆಯಲ್ಲಿ ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ಡಾ. ಸಂಜೀವ ಎಂ. ಪಾಟೀಲ, ಮಕ್ಕಳನ್ನು ದುಡಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿಯನ್ನು ನೀಡಿದರೆ ಅಂತಹ ಅಂಗಡಿ ಹಾಗೂ ಮಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಗರದಲ್ಲಿ ಮಾರ್ನಮಿಕಟ್ಟೆ ಸಮೀಪದಲ್ಲಿ ಕೆಲವು ಬಸ್‌ಗಳು ನಿಗದಿ ಪಡಿಸಿದ ಮಾರ್ಗದಲ್ಲಿ ಚಲಿಸದೇ ತಮ್ಮ ಮನಸ್ಸಿಗೆ ಬಂದಂತೆ ಒಳ ನುಗ್ಗಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಸಂಚಾರ ದಟ್ಟಣೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಲಿತ ಮುಖಂಡರೊಬ್ಬರು ಆಗ್ರಹಿಸಿದರು.

ಈ ಬಗ್ಗೆ ಉತ್ತರಿಸಿದ ಡಿಸಿಪಿ ಸಂಜೀವ್ ಪಾಟೀಲ, ಕೆಲವು ಕಡೆಗಳಲ್ಲಿ ರಸ್ತೆ ಕಾಮಗಾರಿಯಾಗುತ್ತಿರುದರಿಂದ ಮಾರ್ಗ ಬದಲಾವಣೆ ಮಾಡಲಾಗಿದೆ. ಆ ಮಾರ್ಗದಲ್ಲಿ ನಿರ್ದಿಷ್ಟವಾಗಿ ಚಲಿಸುವ ಬಸ್‌ಗೆ ಸಂಬಂಧಪಟ್ಟಂತೆ ಮಾಹಿತಿಯನ್ನು ಎಸಿಪಿ ಟ್ರಾಫಿಕ್ ಅವರಿಗೆ ನೀಡಿ. ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಮಂಕಿಸ್ಟಾಂಡ್‌ನಿಂದ ಓವರ್‌ಬ್ರಿಜ್‌ವರೆಗೆ ಹಲವಾರು ಶಾಲೆ, ಆಶ್ರಮ ಹಾಗೂ ದೇವಸ್ಥಾನಗಳಿವೆ. ಇಲ್ಲಿ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಅಲ್ಲಲ್ಲಿ ಸೂಚನಾಫಲಕಗಳನ್ನು ಅಳವಡಿಸಬೇಕು ಎಂದು ದಲಿತ ಮುಖಂಡರೊಬ್ಬರು ಸಭೆಯಲ್ಲಿ ಆಗ್ರಹಿಸಿದರು. ಸಂಚಾರ ದಟ್ಟಣೆ ದಿನೇದಿನೇ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟ್ರಾಫಿಕ್ ವಾರ್ಡನ್‌ಗಳಾಗಿ ಸೇವೆ ಸಲ್ಲಿಸುವ ಮನಸ್ಸು ಇದ್ದರೆ ಮುಂದೆ ಬನ್ನಿ ಎಂದು ಡಿಸಿಪಿ ಸಂಜೀವ್ ಪಾಟೀಲ್ ಮನವಿ ಮಾಡಿಕೊಂಡರು. ಟ್ರಾಫಿಕ್ ವಾರ್ಡನ್‌ಗಳಾಗಿ ಸೇವೆ ಸಲ್ಲಿಸಲು ಮುಂದೆ ಬಂದರೆ ಅವರಿಗೆ ಸೂಕ್ತ ತರಬೇತಿ ನೀಡಿ, ಸಂಚಾರ ನಿಯಮದ ಕುರಿತು ಉಪಯುಕ್ತ ಮಾಹಿತಿ ನೀಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News