ನೀರಿನ ಸಮಸ್ಯೆ: ಡಾ. ವೀರೇಂದ್ರ ಹೆಗ್ಗಡೆಯವರ ಮನವಿ
ಬೆಳ್ತಂಗಡಿ, ಸೆ.25: ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಕನ್ನಡಿಗರು ನೀರನ್ನು ಮಿತವಾಗಿ ಬಳಸುವಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ಕಾವೇರಿ ನೀರಿನ ಸಮಸ್ಯೆಯಲ್ಲಿ ರಾಜ್ಯ ಸರಕಾರ ದಿಟ್ಟವಾದ ನಿಲುವನ್ನು ತಾಳಿ ತಾತ್ವಿಕವಾದ ಹೋರಾಟವನ್ನು ಮಾಡಿದೆ. ಆದರೆ ಪ್ರಜೆಗಳಿಗೂ ಕರ್ತವ್ಯ ಇದೆ. ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ನೇತ್ರಾವತಿ ನದಿಯಲ್ಲಿಯೂ ನೀರಿನ ಕೊರತೆ ಉಂಟಾಗುವ ಸಾಧ್ಯತೆಯಿದೆ. ಹಾಗಾಗಿ ಈ ಬಾರಿ ನೀರಿನ ಕೊರತೆ ತೀವ್ರ ಉಂಟಾಗುವ ಸಾಧ್ಯತೆ ಇರುವುದರಿಂದ ಜನತೆ ಹನಿಹನಿ ನೀರನ್ನು ಉಳಿಸುವತ್ತ ಗಮನ ಹರಿಸಬೇಕು. ಸಾರ್ವಜನಿಕವಾಗಿ ಪೋಲಾಗುವ ನೀರನ್ನು ತಡೆಯುವುದು ಕೂಡಾ ಕಾವೇರಿ ಮಾತೆಗೆ ಕೊಡುವ ಸೇವೆಯೇ ಆಗಿದೆ.
ರಾಜ್ಯಕ್ಕೆ ಉಂಟಾಗಿರುವ ಜಲ ಸಮಸ್ಯೆ ಶೀಘ್ರ ಬಗೆಹರಿಯಲಿ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರಾಜ್ಯವನ್ನು ಪಾರು ಮಾಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಡಾ.ಡಿ. ವೀರೇಂದ್ರ ಹೆಗ್ಗಡೆ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.