×
Ad

‘ಚಿಲ್ಲರೆ’ ಕಾರಣಕ್ಕೆ ಬಸ್‌ನಿಂದ ನದಿಗೆ ಹಾರಿದ ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕ

Update: 2016-09-25 23:32 IST

ಸುಬ್ರಹ್ಮಣ್ಯ, ಸೆ.25: ಚಿಲ್ಲರೆ ಹಣದ ವಿಚಾರವಾಗಿ ಯುವತಿಯೊಬ್ಬರು ಬಸ್ ಕಂಡಕ್ಟರ್ ಜತೆ ನಡೆಸಿದ ವಿವಾದಕ್ಕೆ ಸಂಬಂಧಿಸಿ ಮನನೊಂದ ಬಸ್ ನಿರ್ವಾಹಕ ಚಲಿಸುತ್ತಿದ್ದ ಬಸ್‌ನಿಂದ ನದಿಗೆ ಹಾರಿದ ಘಟನೆ ರವಿವಾರ ಸುಬ್ರಹ್ಮಣ್ಯದಲ್ಲಿ ಸಂಭವಿಸಿದೆ.

ನದಿನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿಯನ್ನು ಮಂಗಳೂರಿನ ಗುರುಪುರ ಕೈಕಂಬದ ದೇವದಾಸ್ (41) ಎಂದು ಗುರುತಿಸಲಾಗಿದೆ.

ದೇವದಾಸ್ ಮಂಗಳೂರು ಒಂದನೆ ಘಟಕಕ್ಕೆ ಸೇರಿದ ಸಾರಿಗೆ ಬಸ್‌ನಲ್ಲಿ ನಿರ್ವಾಹಕರಾಗಿದ್ದರು. ಬಸ್ ಮಂಗಳೂರಿನಿಂದ ಬೆಳಗ್ಗೆ 6:30ಕ್ಕೆ ಹೊರಟು ಕುಕ್ಕೆ ಸುಬ್ರಹ್ಮಣ್ಯ ಕಡೆ ಸಂಚರಿಸುತ್ತಿತ್ತು. ಮಂಗಳೂರಿನಲ್ಲಿ ಬಸ್ ಏರಿದ ಯುವತಿಯೊಬ್ಬರು ಟಿಕೆಟ್ ಪಡೆಯುವ ಸಂದರ್ಭ ಸಣ್ಣ ಗೊಂದಲ ಉಂಟಾಗಿದೆ. ಯುವತಿ ಟಿಕೇಟ್‌ಗಾಗಿ 500 ರೂ.ನೋಟು ನೀಡಿದ್ದಾಗಿ ಹೇಳಿದ್ದು ದೇವದಾಸ್ 100 ರೂ. ನೀಡಿದ್ದಾಗಿ ಹೇಳಿ ಉಳಿದ ಚಿಲ್ಲರೆ ಹಣ ಯುವತಿಗೆ ನೀಡಿದ್ದರು. ಈ ವಿಚಾರವಾಗಿ ಯುವತಿ ಮತ್ತು ನಿರ್ವಹಕನ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಈ ಘಟನೆಯ ವಿಚಾರವಾಗಿ ಯುವತಿ ತನ್ನ ಸಂಬಂಧಿಕರಿಗೆ ಮೊಬೈಲ್ ಮೂಲಕ ಕರೆ ಮಾಡಿ ತಿಳಿಸಿದ್ದರು. ಪ್ರಕರಣದ ಗಂಭೀರತೆ ಅರಿತ ನಿರ್ವಾಹಕ ಬಸ್ ಕಡಬ ತಲುಪುವ ವೇಳೆಗೆ ಚಾಲಕನ ಬಳಿ ಬಸ್ ನಿಲ್ಲಿಸುವಂತೆ ಸೂಚಿಸಿ, ಯುವತಿ ಜತೆ ನೇರವಾಗಿ ಕಡಬ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಇದೇ ವೇಳೆಗೆ ಯುವತಿಯ ಸಂಬಂಧಿಕರು ಕೂಡ ಠಾಣೆಗೆ ಆಗಮಿಸಿದ್ದರು. ನಿರ್ವಾಹಕ ಮತ್ತು ಯುವತಿ ನಡುವಿನ ಪರಸ್ಪರ ಆರೋಪ-ಪ್ರತ್ಯಾರೋಪ ಕುರಿತಂತೆ ವಿಚಾರಣೆ ನಡೆಸಿದ ಪೊಲೀಸರು ಇಬ್ಬರಿಗೂ ಬುದ್ಧ್ದಿವಾದ ಹೇಳಿ ಪ್ರಕರಣವನ್ನು ಇತ್ಯರ್ಥ ಮಾಡಿ ಕಳುಹಿಸಿಕೊಟ್ಟಿದ್ದರು.

ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ದೇವದಾಸ್ ಬಸ್ ಕಡಬದಿಂದ ಪ್ರಯಾಣ ಮುಂದುವರೆಸಿ ಸುಬ್ರಹ್ಮಣ್ಯದ ಕುಮಾರಧಾರ ನದಿಯ ಸೇತುವೆ ಮೇಲೆ ಸಂಚರಿಸುತ್ತಿದ್ದ ವೇಳೆ ಸೀಟಿ ಊದಿ ಬಸ್ಸನ್ನು ನಿಧಾನಗೊಳಿಸಿ ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ್ದಾರೆ ಎನ್ನಲಾಗಿದೆ.

ಈ ಸಂದರ್ಭ ದೇವದಾಸ್ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿದ್ದ ವೇಳೆ ಸ್ನಾನ ಘಟ್ಟದ ಮೇಲ್ಭಾಗದಲ್ಲಿ ಸ್ನಾನ ಮಾಡುತ್ತಿದ್ದ ಪ್ರವಾಸಿ ಭಕ್ತರೊಬ್ಬರು ರಕ್ಷಣೆಗೆ ಮುಂದಾಗಿ ಮುಳುಗುತ್ತಿದ್ದವರ ಕೈ ಹಿಡಿದು ಮೇಲಕ್ಕೆತ್ತುವ ಯತ್ನ ಮಾಡಿದ್ದಾರೆ. ಆದರೆ ಅವರಿಂದ ಬಿಡಿಸಿಕೊಂಡು ದೇವದಾಸ್ ನೀರು ಪಾಲಾಗಿದ್ದಾರೆ. ದಡದ ಕೆಳಗಿದ್ದವರು ಕೂಡ ರಕ್ಷಣೆಗೆ ಮುಂದಾಗಿದ್ದು ಪ್ರಯತ್ನ ಫಲ ನೀಡಿಲ್ಲ. ಮುಳುಗೇಳುತ್ತಿದ್ದ ವೇಳೆ ನಿರ್ವಾಹಕ ಎರಡೂ ಕೈಗಳನ್ನು ಮೇಲಕ್ಕೆತ್ತಿ ಕೈ ಮುಗಿಯುತ್ತಿದ್ದರು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸಾರಿಗೆ ವ್ಯವಸ್ಥೆಯಲ್ಲಿ ಉತ್ತಮ ಕಾರ್ಯವೆಸಗುವ ಮೂಲಕ ಸಜ್ಜನ ವ್ಯಕ್ತಿಯಾಗಿದ್ದ ದೇವದಾಸ್ ಕಳೆದ ವರ್ಷ ಸಾರಿಗೆ ಸಂಸ್ಥೆ ನೌಕರರಿಗೆ ನೀಡುವ ಉತ್ತಮ ನಿರ್ವಾಹಕ ಪ್ರಶಸ್ತಿಗೆ ಭಾಜನರಾಗಿದ್ದರು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.

''ಮರ್ಯಾದೆ ಹೋಗಿ ಬದುಕುವುದಕ್ಕಿಂತ ಸಾಯುವುದೇ ಲೇಸು. ನನ್ನ ಸಹೋದ್ಯೋಗಿಗಳಿಗೆ ಕೊನೆ ನಮಸ್ಕಾರಗಳು'' ಎಂದು ದೇವದಾಸ್ ಡೆತ್‌ನೋಟ್ ಬರೆದಿದ್ದಾರೆಂದು ತಿಳಿದು ಬಂದಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣಾಧಿಕಾರಿ ಗೋಪಾಲ ಬಿ. ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ದೇವದಾಸ್‌ರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ದೇವದಾಸ್‌ಗೆ ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News