ಗುರುರಾಜ್ ಸನಿಲ್‌ರ ‘ವಿಷಯಾಂತರ’ ಕೃತಿ ಬಿಡುಗಡೆ
ಉಡುಪಿ, ಸೆ.25: ನಮ್ಮ ಮನೆ ನಮ್ಮ ಮರ ತಂಡದ ಆಯೋಜನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಸಹಕಾರದೊಂದಿಗೆ ಉರಗ ತಜ್ಞ ಗುರುರಾಜ್ ಸನಿಲ್ ಅವರ ಆರನೆ ಕೃತಿ ವಿಷಯಾಂತರ- ನರಜೀವಿ- ಉರಗ ಜೀವಿಗಳ ಒಡನಾಟದ ಜೀವನಗಾಥೆ ಬಿಡುಗಡೆ ಸಮಾರಂಭವು ರವಿವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿತು.
ಕಾಲೇಜಿನ ಆವರಣದಲ್ಲಿ ನಾಗಲಿಂಗ ಪುಷ್ಪ ಗಿಡ ನೆಟ್ಟು ಬಳಿಕ ಕೃತಿಯನ್ನು ಪರಿಸರ ಚಿಂತಕ ಡಾ.ನರೇಂದ್ರ ರೈ ದೇರ್ಲ ಬಿಡುಗಡೆಗೊಳಿಸಿ ಕೃತಿ ಪರಿಚಯಿಸಿದರು. ಸನಿಲ್ ಅವರ ಕೃತಿಗಳ ಕುರಿತು ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಮಾತನಾಡಿದರು.
ಮಂಗಳೂರಿನ ಪ್ರಕಾಶಕ ಕಲ್ಲೂರು ನಾಗೇಶ್, ಕೃತಿಕಾರ ಗುರುರಾಜ್ ಸನಿಲ್ ಉಪಸ್ಥಿತರಿದ್ದರು. ನಮ್ಮ ಮನೆ ನಮ್ಮ ಮರ ಅಭಿಯಾನದ ರೂವಾರಿ ಅವಿನಾಶ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ಮಣಿಪಾಲದ ಅನುಧ್ವನಿ ಕಲಾವಿದರಿಂದ ‘ಯೂ ಟರ್ನ್’ ಎಂಬ ಕನ್ನಡ ನಾಟಕ ಪ್ರದರ್ಶನಗೊಂಡಿತು.