×
Ad

ಮಾನವ ಹಕ್ಕುಗಳ ಜಾಗೃತಿ ಕುರಿತು ವಿಚಾರ ಸಂಕಿರಣ

Update: 2016-09-26 11:44 IST

ಮಂಗಳೂರು, ಸೆ.26: ಮಾನವ ಹಕ್ಕುಗಳ ಮಹಾಮೈತ್ರಿ ಹಾಗೂ ಮಾನವ ಹಕ್ಕುಗಳ ಸಂಘದ ಆಶ್ರಯದಲ್ಲಿ ಮಾನವ ಹಕ್ಕುಗಳ ಜಾಗೃತಿ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು  ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜೆ. ಹುನಗುಂದ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು,  ಎಲ್ಲಾ ಧರ್ಮ ಗಳು ಮಾನವ ಹಕ್ಕುಗಳ ಪ್ರತಿಪಾದನೆ ಮಾಡಿಕೊಂಡು ಬಂದಿದೆ. ಎಲ್ಲಾ ಧರ್ಮ ಗ್ರಂಥಗಳಲ್ಲಿಯೂ ಮಾನವ ಹಕ್ಕುಗಳ  ಬಗ್ಗೆ ಪ್ರತಿಪಾದನೆ ಇದೆ. ವಚನ ಸಾಹಿತ್ಯದ ಕಾಲದಲ್ಲೇ  ಮಾನವ ಹಕ್ಕುಗಳ ಬಗ್ಗೆ ಮಾರ್ಮಿಕವಾಗಿ ತಿಳಿಸಲಾಗಿದೆ.  ಬದುಕು, ಸ್ವಾತಂತ್ರ್ಯ, ಸಮಾನತೆ, ಘನತೆಯ  ತತ್ವದ ಮೇಲೆ ಮಾನವ  ಹಕ್ಕುಗಳಿವೆ ಎಂದರು.

ಹಕ್ಕುಗಳ ಉಲ್ಲಂಘನೆ ಆಗಬಾರದು ಎಂದು ಸಂವಿಧಾನ ಜಾರಿಯಾಯಿತು. ಆದರೆ ಮಾನವ ಹಕ್ಕುಗಳ ಉಲ್ಲಂಘನೆ ನಿಲ್ಲದ ಹಿನ್ನೆಲೆಯಲ್ಲಿ 2007ರಲ್ಲಿ ಮಾನವ ಹಕ್ಕುಗಳ ಆಯೋಗದ ರಚನೆಯಾಯಿತು. ವ್ಯವಸ್ಥೆಯಲ್ಲಿ ಅಯೋಗ್ಯಗಳು ಹೆಚ್ಚಾದಾಗ ಆಯೋಗಗಳು ರಚನೆಯಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ತಡೆಯಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ರಾಜ್ಯದಲ್ಲಿ ಬೆಂಗಳೂರಿನಲ್ಲಿ ಶೇಕಡ 60-65 ಶೇ. ಮತ್ತು ಉಳಿದ ಜಿಲ್ಲೆಗಳಲ್ಲಿ ಶೇಕಡ  45-50 ರಷ್ಟು ಪೊಲೀಸ್ ದೌರ್ಜನ್ಯಗಳಾಗುತ್ತಿದೆ. ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ನಾಗರಿಕರು ಮತ್ತು ಪೊಲೀಸರ ಸಮಾನ ಜವಾಬ್ದಾರಿಯಿದೆ. ಯಾರ ವೈಯಕ್ತಿಕ ಘನತೆಗೂ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದರು.   

ಕಾರ್ಯಕ್ರಮ ದಲ್ಲಿ ಮಂಗಳೂರು ವಿ.ವಿ. ಕಾಲೇಜು ಪ್ರಾಂಶುಪಾಲ  ಡಾ.ಉದಯಕುಮಾರ್ , ಮಂಗಳೂರು ವಿ ವಿ ಸಿಂಡಿಕೇಟ್ ಸದಸ್ಯ ಅಶೋಕ್  ರೈ, ಮಕ್ಕಳ ಹಕ್ಕುಗಳ ಸಮಿತಿ  ಅಧ್ಯಕ್ಷ ದಿನೇಶ್ ಹೆಗ್ಡೆ ಉಳೆಪಾಡಿ, ಹ್ಯೂಮನ್ ರೈಟ್ ಫೆಡರೇಶನ್ನ  ಅಧ್ಯಕ್ಷ ಕೊಲ್ಲಾಡಿ ಬಾಲಕೃಷ್ಣ ರೈ, ಹ್ಯೂಮನ್ ರೈಟ್ ಫೆಡರೇಶನ್ನ  ಸಿಇಒ ಶಿವರಾಜು ಬಿ. ಅಯ್ಯರ್ ಉಪಸ್ಥಿತರಿದ್ದರು.

ಡಾ.ಲತಾ ಎ. ಪಂಡಿತ್ ಸ್ವಾಗತಿಸಿದರು, ರಾಜೇಶ್ವರಿ ಸಿ. ವಂದಿಸಿದರು. ಡಾ.ದಯಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News