×
Ad

ಆಸ್ತಿ, ಐಶ್ವರ್ಯಕ್ಕಿಂತ ಶಿಕ್ಷಣ ಸಂಪತ್ತು ಬಲು ದೊಡ್ಡದು: ರಮಾನಾಥ ರೈ

Update: 2016-09-26 17:23 IST

ಕೊಣಾಜೆ, ಸೆ.26: ಒಬ್ಬ ವ್ಯಕ್ತಿ ತಾನು ಬದುಕಿನಲ್ಲಿ ಗಳಿಸುವ ಐಶ್ವರ್ಯ, ಆಸ್ತಿ, ಸಂಪತ್ತು ಅದೆಲ್ಲವೂ ತಾತ್ಕಾಲಿಕ ಸಂತಸ ಕೊಡುವುದು. ಆದರೆ ಒಬ್ಬ ವ್ಯಕ್ತಿ ಶಿಕ್ಷಿತನಾದಾಗ ಅವನು ಗಳಿಸಿದ ಸಂಪತ್ತು ಬಲು ದೊಡ್ಡದು. ಜಿಲ್ಲೆಯಲ್ಲಿ ಕಣಚೂರು ಮೆಡಿಕಲ್ ಕಾಲೇಜು ಯಂಗೆಸ್ಟ್ ಮೆಡಿಕಲ್ ಕಾಲೇಜು’ ಆಗಿದ್ದು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯ ಅಭಿವೃದ್ಧಿಗೆ ದೇವರು ಎಲ್ಲ ರೀತಿಯಲ್ಲಿ ಅನುಗ್ರಹಿಸಲಿ ಎಂದು ಸಚಿವ ಬಿ. ರಮಾನಾಥ ರೈ ಹಾರೈಸಿದರು.

ಅವರು ಸೋಮವಾರ ದೇರಳಕಟ್ಟೆಯ ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸು ಹಾಗೂ ನರ್ಸಿಂಗ್, ಫಿಸಿಯೋಥೆರಪಿಗೆ ಚಾಲನೆ ನೀಡಿ ಮಾತನಾಡಿದರು.

ಒಬ್ಬ ಕ್ರಿಯಾಶೀಲ ವ್ಯಕ್ತಿಗೆ ಇಚ್ಛಾಶಕ್ತಿ ಇದ್ದಾಗ ಈ ಸಮಾಜಕ್ಕೆ ಏನಾದರೂ ಕೊಡಬೇಕು ಎಂದು ಯೋಚಿಸಿದಾಗ ಅದು ಯಾವ ಮಟ್ಟಿಗೆ ಸಾಕಾರಗೊಳ್ಳಲು ಸಾಧ್ಯ ಎಂಬುದಕ್ಕೆ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಕಣಚೂರು ಮೋನು ಅವರು ವೈದ್ಯಕೀಯ ಕಾಲೇಜು ಆರಂಭಿಸಿರುವುದು ಉತ್ತಮ ನಿದರ್ಶನ ವಾಗಿದೆ. ಕಣಚೂರು ವಿದ್ಯಾಸಂಸ್ಥೆ ಸಮಾಜಸೇವಾ ಮನೋಭಾವನೆಯೊಂದಿಗೆ ಖ್ಯಾತಿಯನ್ನು ಗಳಿಸುವಂತಾಗಲಿ ಎಂದು ಹೇಳಿದರು.

ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಪ್ರೊ. ಡಾ.ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ, ಮಂಗಳೂರಿನಲ್ಲಿ ಇರುವ ಸಾಕಷ್ಟು ಸಂಖ್ಯೆಯಲ್ಲಿರುವ ಬ್ಯಾಂಕ್, ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳು, ಉತ್ತಮ ಗುಣಮಟ್ಟದ ಶಿಕ್ಷಣ, ನಿಸ್ವಾರ್ಥ ಸೇವೆ ಹಾಗೂ ಪ್ರತಿಯೊಂದು ಸಂಸ್ಥೆಯ ಕಾರ್ಯವೈಖರಿ ಜಿಲ್ಲೆಯ ಜನತೆ ಹೆಮ್ಮೆಪಡುವಂತೆ ಮಾಡಿದೆ ಎಂದು ಹೇಳಿದರು.

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಶಾಸಕ ಜೆ.ಆರ್. ಲೋಬೊ, ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ, ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಎಂ. ಚಂದ್ರಶೇಖರ್, ಮಂಗಳೂರು ವಿವಿ ಕುಲಪತಿ ಪ್ರೆೊ.ಕೆ.ಬೈರಪ್ಪ, ಉಳ್ಳಾಲ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಉದ್ಯಮಿ ಅಬ್ದುಲ್ ಖಾದರ್, ಲಯನ್‌ಕ್ಲಬ್ ಮಂಗಳ ಗಂಗೋತ್ರಿ ಮಾಜಿ ಅಧ್ಯಕ್ಷ ರಘುರಾಮ ಕಾಜವ, ಮೂಡಾ ಮಾಜಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ ಹಾಗೂ ಎ.ಎ. ಹೈದರ್ ಪರ್ತಿಪ್ಪಾಡಿ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಯು.ಕೆ. ಮೋನು ಸ್ವಾಗತಿಸಿದರು. ಸಾಹಿಲ್ ಝಾಹಿರ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಟ್ರಸ್ಟಿ ಕಣಚೂರು ಅಬ್ದುರ್ರಹ್ಮಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News