ಪುತ್ತೂರು: ತರಕಾರಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಗೆ ಖಂಡನೆ

Update: 2016-09-26 12:54 GMT

ಪುತ್ತೂರು, ಸೆ.26: ಪುತ್ತೂರಿನ ನಗರಸಭೆಯ ಅಧಿಕಾರಿಗಳು ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸುತ್ತಿದ್ದು, ಹೊಟ್ಟೆ ಪಾಡಿಗಾಗಿ ತರಕಾರಿ ವ್ಯಾಪಾರ ನಡೆಸುತ್ತಿದ್ದ ಸಣ್ಣ ಪುಟ್ಟ ಬಡ ವ್ಯಾಪಾರಿಗಳನ್ನು ಪೊಲೀಸ್ ಬಲ ಪ್ರಯೋಗದಲ್ಲಿ ಬಲವಂತದಲ್ಲಿ ತೆರವುಗೊಳಿಸುತ್ತಿರುವುದು ಖಂಡನೀಯ ಎಂದು ಪುತ್ತೂರು ನಗರಸಭಾ ಸದಸ್ಯ ರಾಜೇಶ್ ಬನ್ನೂರು ತಿಳಿಸಿದ್ದಾರೆ.

ಅವರು ಸೋಮವಾರ ಪುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ರವಿವಾರ ಕೆಲವೊಂದು ಸಣ್ಣ ಪುಟ್ಟ ತರಕಾರಿ ವ್ಯಾಪಾರಿಗಳು ಮುಚ್ಚಿರುವ ಅಂಗಡಿ ಬದಿಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವುದು ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇವರು ಯಾರೂ ಫುಟ್‌ಪಾತ್‌ನಲ್ಲಿ ತರಕಾರಿ ಹರಡುವುದಿಲ್ಲ. ಇದರಿಂದಾಗಿ ಟ್ರಾಫಿಕ್ ಸಮಸ್ಯೆಗಳೂ ಆಗುತ್ತಿರಲಿಲ್ಲ. ಆದರೂ ಪೊಲೀಸರ ಮೂಲಕ ಬಲವಂತದಿಂದ ತೆರವುಗೊಳಿಸಲಾಗಿದೆ ಎಂದು ಆರೋಪಿಸಿದ ಅವರು ಇದರೊಂದಿಗೆ ಪುತ್ತೂರಿನ ಐತಿಹಾಸಿಕ ಸಂತೆಯನ್ನು ರದ್ದುಪಡಿಸಿರುವುದನ್ನು ಪುತ್ತೂರಿನ ಜನತೆ ಸಹಿಸುವುದಿಲ್ಲ. ಕಿಲ್ಲೆ ಮೈದಾನದಿಂದ ಸ್ಥಳಾಂತರಗೊಂಡಿರುವ ಪುತ್ತೂರು ವಾರದ ಸಂತೆ ಇಂದಲ್ಲ ನಾಳೆ ಮತ್ತೆ ಕಿಲ್ಲೆ ಮೈದಾನಕ್ಕೆ ಬರುವುದು ನಿಶ್ಚಿತ. ಪುತ್ತೂರಿನ ಸಂತೆ ಎಲ್ಲಿ ನಡೆಯಬೇಕು ಎಂದು ನಿರ್ಧರಿಸಬೇಕಾದರು ಪುತ್ತೂರಿನ ಜನರೇ ಹೊರತು ಅಧಿಕಾರಿಗಳಲ್ಲ ಎಂದರು.

ಕೆಲವು ದಿನಗಳ ಹಿಂದೆ ಪುತ್ತೂರಿನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ ಅಕ್ರಮವಾಗಿ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆ ಹಚ್ಚಿದ್ದರು. ಇದರ ವಿರುದ್ಧ ಎಪಿಎಂಸಿ ಅಧ್ಯಕ್ಷರು ಹೇಳಿಕೆ ನೀಡಿ, ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಹೇಳಿದ್ದರು. ಅಡಿಕೆ ಸಾಗಾಟ ತಡೆದರೆ ಪೊಲೀಸ್ ದೌರ್ಜನ್ಯ ಎಂದಾದರೆ ತರಕಾರಿ ಮಾರಾಟ ಮಾಡುವ ಬಡ ವ್ಯಾಪಾರಿಗಳನ್ನು ಬಲವಂತವಾಗಿ ಎಬ್ಬಿಸುವುದು ದೌರ್ಜನ್ಯವಲ್ಲವೇ? ಎಪಿಎಂಸಿ ಅಧ್ಯಕ್ಷರು ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಇವೆಲ್ಲದರ ಹಿಂದೆ ಕೆಲವೊಂದು ಷಡ್ಯಂತ್ರವಿದೆ ಎಂದು ಅವರು ಹೇಳಿದರು.

1964ರ ಕರ್ನಾಟಕ ಮುನಿಸಿಪಲ್ ಕಾಯ್ದೆಯ 256ನೆ ಕಲಂ ಪ್ರಕಾರ ತರಕಾರಿ ಮಾರಾಟ ಮಾಡಲು ಪರವಾನಿಗೆಯ ಅಗತ್ಯವಿಲ್ಲ. ನ್ಯಾಯಾಲಯ ಕೂಡ ಇದನ್ನು ಎತ್ತಿ ಹಿಡಿದಿದೆ. ಆದರೆ ವಾರದ ಒಂದು ದಿನ ಯಾರಿಗೂ ತೊಂದರೆಯಾಗದ ಜಾಗದಲ್ಲಿ ತರಕಾರಿ ಮಾರುತ್ತಿದ್ದವರನ್ನು ತೆರವು ಮಾಡುವ ಮೂಲಕ ಈ ನಿಯಮ ಉಲ್ಲಂಘಿಸಲಾಗಿದೆ ಎಂದು ಆಪಾದಿಸಿದರು.

ನಗರಸಭೆ ಕಟ್ಟಡದ ಪಕ್ಕದಲ್ಲಿರುವ ಮಂಗಳಾಮ್ರತ ಸೌಧದಲ್ಲಿ ನಡೆಯುತ್ತಿರುವ ತರಕಾರಿ ಬಜಾರ್ ಮೇಲೆ ಕೆಂಗಣ್ಣು ಬೀರಲಾಗಿದೆ. ಉಪವಿಭಾಗಾಧಿಕಾರಿಗಳ ಆದೇಶದ ಮೇರೆಗೆ ನಾವು ಇದರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳುವ ನಗರಭೆ ಅಧಿಕಾರಿಗಳು, ಈ ಬಗ್ಗೆ ಲಿಖಿತ ಆದೇಶ ತೋರಿಸಲಿ. ಮಂಗಳಾಮೃತ ಸೌಧ ಅನಧಿಕೃತ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಅದು ನಿಜವೇ ಆಗಿದ್ದಲ್ಲಿ ನಗರಸಬೆ ತಾಕತ್ತಿದ್ದರೆ ಈ ಕಟ್ಟಡವನ್ನು ಕೆಡವಿ ಹಾಕಲಿ ಎಂದು ಸವಾಲು ಹಾಕಿದರು.

ಕೋರ್ಟು ರಸ್ತೆ ಅಗಲೀಕರಣ ವಿಚಾರದಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಕೆಲವು ಕಿಡಿಗೇಡಿಗಳು ಆಧಾರರಹಿತ, ಅನಾವಶ್ಯಕ ವಿಷಯಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಕೋರ್ಟ್ ರಸ್ತೆ ಅಗಲೀಕರಣಕ್ಕೆ ಯಾರ ವಿರೋಧವೂ ಇಲ್ಲ. ಕಟ್ಟಡ ಮಾಲಕರಿಗೆ ಪರಿಹಾರ ನೀಡಿ ಅಗಲೀಕರಣ ಮಾಡಲಿ. ಪಾರ್ಕಿಂಗ್ ಇಲ್ಲದ ಕಟ್ಟಡಗಳನ್ನು ಮಾರ್ಕ್ ಮಾಡುವುದಾದರೆ ಮೊದಲು ಮಿನಿ ವಿಧಾನಸೌಧ, ಕೋರ್ಟ್ ಕಟ್ಟಡ, ಆರ್‌ಟಿಒ ಕಟ್ಟಡಗಳನ್ನೂ ಮಾರ್ಕ್ ಮಾಡಲಿ ಎಂದು ಆಗ್ರಹಿಸಿದರು. ಎಪಿಎಂಸಿಯವರು ಲಕ್ಷಾಂತರ ರೂ. ತೆರಿಗೆ ನಗರಸಭೆಗೆ ನೀಡದೆ ಬಾಕಿ ಇರಿಸಿಕೊಂಡಿದ್ದಾರೆ ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News