ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಹಿಳಾ ಕಾರ್ಯಕರ್ತೆಯರ ಸಭೆ
ಮಂಗಳೂರು,ಸೆ.26:ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಹಿಳಾ ಕಾರ್ಯಕರ್ತೆಯರ ಸಭೆಯನ್ನು ನಗರದ ಕಾಂತಿ ಚರ್ಚ್ ಸಭಾಂಗಣದಲ್ಲಿ ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಮಮತಾ ಗಟ್ಟಿ ಉದ್ಘಾಟಿಸಿದರು.
ಕಾಂಗ್ರೆಸ್ ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಅವಕಾಶಗಳನ್ನು ನೀಡುತ್ತಾ ಬಂದ ಪಕ್ಷವಾಗಿದೆ. ದಲಿತ, ಹಿಂದುಳಿದ ಹಾಗೂ ಸಮಾಜದ ವಿವಿಧ ವರ್ಗದಲ್ಲಿದ್ದ ಶೋಷಿತ ಮಹಿಳೆಯರಿಗೆ ಕಾಂಗ್ರೆಸ್ ರಾಜಕೀಯ ಸ್ಥಾನಮಾನ ನೀಡಿದ ಕಾರಣ ಇಂದು ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಮಹಿಳೆಯರಿಗೂ ಶೇ. 33 ಮೀಸಲಾತಿ ದೊರೆಯಲು ಸಾಧ್ಯವಾಯಿತು. ದೇಶದಲ್ಲಿ ಇಂದಿರಾ ಗಾಂಧಿಯವರ ಕಾಲದಿಂದಲೂ ಜಾತ್ಯತೀತ ನೆಲೆಯಲ್ಲಿ ಕಾಂಗ್ರೆಸ್ ಎಲ್ಲಾ ಮಹಿಳೆಯರ ಏಳಿಗೆಗೂ ಶ್ರಮಿಸಿದ ಇತಿಹಾಸ ಹೊಂದಿದೆ. ಮುಂದಿನ ಹಂತದಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಸಮಾವೇಶ ನಡೆಸಿದ ಬಳಿಕ ಜಿಲ್ಲಾ ಮಟ್ಟದ ಬೃಹತ್ ಮಹಿಳಾ ಸಮಾವೇಶ ನಡೆಸಲಾಗುವುದು ಎಂದು ಮಮತಾ ಗಟ್ಟಿ ತಿಳಿಸಿದರು.
ಇಂದಿರಾ ಗಾಂಧಿಯಂತಹ ದಿಟ್ಟ ಮಹಿಳಾ ನಾಯಕತ್ವದಿಂದ ಮಹಿಳೆಯರು ಕಾಂಗ್ರೆಸ್ ಮೂಲಕ ಮುಂದೆ ಬರಲು ಸಾಧ್ಯವಾಯಿತು. ಹಲವು ಸೌಲಭ್ಯಗಳನ್ನು ಹೊಂದಲು ಸಾಧ್ಯವಾಯಿತು. ಮುಖ್ಯವಾಗಿ ಭೂಸುಧಾರಣೆಯನ್ನು ಜಾರಿ ಮಾಡಲು ಉಕ್ಕಿನ ಮಹಿಳೆ ಎಂದು ಕರೆಸಿಕೊಂಡ ಇಂದಿರಾ ಗಾಂಧಿಯವರು ತೆಗೆದುಕೊಂಡ ದೃಢ ನಿರ್ಧಾರ ಕಾರಣವಾಯಿತು. ಕಾಂಗ್ರೆಸ್ ಮಹಿಳೆಯರಿಗೆ ವಿಧಾನ ಸಭೆ, ಲೋಕಸಭೆಗಳಲ್ಲೂ ಶೇ.33ರಷ್ಟು ಮೀಸಲಾತಿ ನೀಡಬೇಕೆಂಬ ನಿಲುವನ್ನು ಹೊಂದಿತ್ತು. ಸ್ಥಳೀಯಾಡಳಿತದಲ್ಲಿ ಶೇ. 33 ಮೀಸಲಾತಿಯನ್ನು ಮಹಿಳೆಯರಿಗೆ ನೀಡಲಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಮಹಿಳೆಯರಿಗೂ ಪುರುಷರಿಗೆ ಸಮಾನವಾದ ಸ್ಥಾನ ಮಾನ, ಗೌರವಗಳು ದೊರೆಯಬೇಕಾಗಿದೆ. ಮಹಿಳಾ ನಾಯಕತ್ವ ವಹಿಸಿಕೊಳ್ಳಲು ಮಹಿಳೆಯರು ಮುಂದೆ ಬರಬೇಕಾಗಿದೆ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ವಿಧಾನ ಸಭೆ, ಲೋಕಸಭೆಗಳಲ್ಲಿ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಮಹಿಳಾ ಜಾಗೃತಿಯಾಗಬೇಕಾಗಿದೆ ಎಂದು ಡೀಡ್ಸ್ ಸಂಸ್ಥೆಯ ನಿರ್ದೇಶಕ ಮರ್ಲಿನ್ ಮಾರ್ಟಿಸ್ ಡಿಸೋಜ ತಿಳಿಸಿದರು.
ಪ್ರಪಂಚದಲ್ಲಿ ಮಹಿಳೆಯರು ಓಟಿನ ಹಕ್ಕಿಗಾಗಿ 200ವರ್ಷಗಳ ಕಾಲ ಹೋರಾಟ ನಡೆಸಬೇಕಾಯಿತು. ಆದರೆ ಬದಲಾದ ಕಾಲಘಟ್ಟದಲ್ಲಿ ವಿವಿಧ ದೇಶಗಳ ಆಡಳಿತ ನಡೆಸುವ ಪ್ರಮುಖ ಅಂಗಗಳಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದ ಸಂಸತ್ತಿನಲ್ಲಿಯೂ ಮಹಿಳೆಯರು ಮೀಸಲಾತಿ ಹೊಂದಿದ್ದಾರೆ. ಭಾರತದ ಸಂಸತ್ತಿನಲ್ಲಿಯೂ ಮಹಿಳೆಯರಿಗೆ ಮೀಸಲಾತಿ ದೊರೆತಾಗ ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವಕಾಶ ದೊರೆತಾಗ ಮಹಿಳಾ ಪರವಾದ ಕಾರ್ಯಕ್ರಮಗಳು, ಯೋಜನೆಗಳು ಜಾರಿಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯರು ಜಾಗೃತರಾಗಿ ಕ್ರೀಯಾಶೀಲರಾಗಬೇಕಾಗಿದೆ ಎಂದು ಮರ್ಲಿನ್ ಮಾರ್ಟಿಸ್ ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಕಾರ್ಯಕರ್ತೆ ಗಂಗಮ್ಮ ಬಜಾಲ್‌ರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಮಿತಾ ಡಿ. ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ತೇಜೋಮಯ, ಪ್ರಭಾಕರ ಶ್ರೀಯಾನ್, ಟಿ.ಕೆ.ಸುಧೀರ್, ಜೆಸಿಂತ ವಿಜಯ ಅಲ್ಪ್ರೆಡ್, ಉಮೇಶ್ಚಂದ್ರ, ವಿಶ್ವಾಸ್ ದಾಸ್, ಅಬ್ದುಲ್ ಸಲೀಂ, ಅಬೂಬಕರ್, ಮನಪಾ ಸದಸ್ಯೆಯರಾದ ಅಪ್ಪಿ, ಸಬಿತಾ ಮಿಸ್ಕಿತ್, ರತಿಕಲಾ, ಕವಿತಾ ವಾಸು, ಸುಮಯ, ಅಖಿಲ್ ಆಳ್ವ, ಆಶಾ ಡಿಸಿಲ್ವ ಮೊದಲಾದವರು ಉಪಸ್ಥಿತರಿದ್ದರು.
ಶೋಭಾ ಕೇಶವನ್ ಸ್ವಾಗತಿಸಿದರು. ವಿದ್ಯಾ ವಂದಿಸಿದರು.