ಕುಂದಾಪುರದಲ್ಲಿ ಸರಣಿ ಕಳ್ಳತನ: ದೈವಸ್ಥಾನ, ಅಂಗಡಿಗಳಿಗೆ ನುಗ್ಗಿ ಸೊತ್ತು ಕಳವು
ಕುಂದಾಪುರ, ಸೆ.26: ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೈವಸ್ಥಾನ ಹಾಗೂ ಎರಡು ಅಂಗಡಿಗಳಿಗೆ ಸೆ.25ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಅಸೋಡು ಬೆಂಕಿಕಾನ್ ಶ್ರೀನಂದಿಕೇಶ್ವರ ದೈವಸ್ಥಾನದ ಹಿಂದಿನ ಶಟರ್ ಮುರಿದು ಒಳನುಗ್ಗಿದ ಕಳ್ಳರು ಬೆಳ್ಳಿಯ ಪ್ರಭಾವಳಿ ಹಾಗೂ ಗರ್ಭಗುಡಿ ಬಾಗಿಲಿಗೆ ಅಳವಡಿಸಿದ್ದ ಬೆಳ್ಳಿಯ ಕವಚ ಮತ್ತು ಸಿಸಿ ಕ್ಯಾಮೆರಾವನ್ನು ಕಳವು ಗೈದಿದ್ದಾರೆ. ಇವುಗಳ ಒಟ್ಟು ವೌಲ್ಯ ಸುಮಾರು 23ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಬಸ್ರೂರಿನ ಬಿ.ಎಚ್.ರಸ್ತೆಯಲ್ಲಿರುವ ಎಸ್.ಎಸ್.ಫ್ಯಾನ್ಸಿ ಮೊಬೈಲ್ ಅಂಗಡಿಗೆ ನುಗ್ಗಿ ಕಳ್ಳರು ಒಟ್ಟು 20ಸಾವಿರ ರೂ. ವೌಲ್ಯದ ಏಳು ಮೊಬೈಲ್ ಸೇರಿದಂತೆ ಹಲವು ಸೊತ್ತುಗಳನ್ನು ಕಳವು ಮಾಡಿದ್ದಾರೆ. ಅದೇ ರೀತಿ ಆನಗಳ್ಳಿಯ ಹಳೆ ಪೋಸ್ಟ್ ಆಫೀಸ್ ಸಮೀಪ ಇರುವ ತೊಪ್ಲು ನಿವಾಸಿ ದಿನಕರ ಎಂಬವರ ಮಾತಾ ಇಲೆಕ್ಟ್ರಿಕಲ್ಸ್ ಅಂಗಡಿಯ ಶಟರ್ ಮುರಿದು ಒಳನುಗ್ಗಿದ ಕಳ್ಳರು 18ಸಾವಿರ ರೂ. ವೌಲ್ಯದ ವಿದ್ಯುತ್ ಪರಿಕರ ಹಾಗೂ 15ಸಾವಿರ ರೂ. ನಗದು ಕಳವು ಮಾಡಿದ್ದಾರೆ.
ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಪ್ರವೀಣ್ ನಾಯಕ್, ಪ್ರಭಾರ ವೃತ್ತ ನಿರೀಕ್ಷಕ ರಾಘವ ಪಡೀಲ್, ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೇನ್, ಅಪರಾಧ ವಿಭಾಗದ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ತನಿಖೆ ನಡೆಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.