×
Ad

ಮಹಿಳಾ-ಮಕ್ಕಳ ಆಸ್ಪತ್ರೆಯೊಂದಿಗೆ ಮೈನ್ ಶಾಲೆ ಎತ್ತಂಗಡಿ?

Update: 2016-09-26 23:20 IST

ಉಡುಪಿ, ಸೆ.26: ನಗರದ ಕೇಂದ್ರಸ್ಥಾನವಾದ ಕೆ.ಎಂ.ಮಾರ್ಗದಲ್ಲಿ ನಗರಸಭೆಯ ಎದುರಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಅನಿವಾಸಿ ಭಾರತೀಯರೊಬ್ಬರಿಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಲು ಅನುವಾಗುವಂತೆ ಖಾಸಗೀಕರಣ ಪ್ರಕ್ರಿಯೆ ಬಿರುಸಿನಿಂದ ಸಾಗಿರುವಂತೆಯೇ ಇದೀಗ ಅದರ ಪಕ್ಕದಲ್ಲೇ ಇರುವ ಸರಕಾರಿ ಪ್ರಾಥಮಿಕ ಶಾಲೆಯೂ ಎತ್ತಂಗಡಿಯ ಭೀತಿ ಎದುರಿಸುತ್ತಿರುವ ವರದಿಗಳು ಬಂದಿವೆ.

ಜಿಲ್ಲೆಯ ಬಡ ಹಾಗೂ ಹಿಂದುಳಿದವರ ಆರೋಗ್ಯ ಕಾಳಜಿಯಿಂದ ಉಡುಪಿಯ ಹಾಜಿ ಅಬ್ದುಲ್ಲಾ ಅವರು 1930ರಲ್ಲಿ ತನ್ನ ಸ್ವಂತ ಜಾಗದೊಂದಿಗೆ ಆಸ್ಪತ್ರೆಯನ್ನು ನಿರ್ಮಿಸಿಕೊಟ್ಟು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಪ್ರಾರಂಭಿಸಿದ್ದರೆ, ಅದಕ್ಕಿಂತ 45 ವರ್ಷ ಮೊದಲೇ ಅಲ್ಲೇ ಪ್ರಾಥಮಿಕ ಶಾಲೆಯೊಂದನ್ನು ಸ್ಥಾಪಿಸಿದ್ದರು.

ಇದೀಗ ಈ ಶಾಲೆ ಮಹಾತ್ಮ ಗಾಂಧಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಮೈನ್ ಶಾಲೆ) ಎಂಬ ಹೆಸರಿನಲ್ಲಿ ನಗರಸಭೆಯ ಎದುರೇ ಕಾರ್ಯಾಚರಿಸುತ್ತಿದೆ. 131 ವಸಂತಗಳನ್ನು ಕಂಡಿರುವ ಈ ಶಾಲೆಯಲ್ಲಿ ಈಗ ಒಂದರಿಂದ 7ನೇ ತರಗತಿಯವರೆಗೆ ಕಲಿಯುತ್ತಿರುವ 72 ಮಕ್ಕಳಿದ್ದಾರೆ. ಹಾಗೂ ಮುಖ್ಯೋಪಾದ್ಯಾಯ ಶಂಭು ಸುವರ್ಣ ಸೇರಿದಂತೆ ಐವರು ಶಿಕ್ಷಕರಿದ್ದಾರೆ. ಇವರೆಲ್ಲರೂ ವಲಸೆ ಕಾರ್ಮಿಕರ ಮಕ್ಕಳೆಂಬುದು ವಿಶೇಷ. ವಲಸೆ ಕಾರ್ಮಿಕ ರು ಉಡುಪಿಯಲ್ಲಿ ಇಲ್ಲದಿರುತ್ತಿದ್ದರೆ ಈ ಶಾಲೆ ಎಂದೋ ಬಾಗಿಲು ಮುಚ್ಚಿರುತ್ತಿತ್ತು. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ 3.60ಎಕರೆ ಜಾಗದೊಂದಿಗೆ ಅದರ ಪಕ್ಕದಲ್ಲೇ ಇರುವ ಈ ಶಾಲೆಯ 20 ಸೆನ್ಸ್ ಜಾಗವನ್ನು ಸರಕಾರ ಬಿ.ಆರ್.ಶೆಟ್ಟಿ ಅವರ ಸುಪರ್ದಿಗೆ ಒಪ್ಪಿಸುವ ಸಾಧ್ಯತೆ ಇದೆ ಎಂದು ಶಾಲೆಯ ಹಳೆ ವಿದ್ಯಾರ್ಥಿಗಳು ಸಂಶಯ ವ್ಯಕ್ತಪಡಿಸುತಿದ್ದಾರೆ.

ಇತ್ತೀಚೆಗೆ ಕಂದಾಯ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಜಾಗದ ಸರ್ವೆ ನಡೆಸುವ ಸಂದರ್ಭದಲ್ಲಿ ಅದರ ಎದುರಿಗೇ ಇರುವ ಈ ಶಾಲೆಯ ಸರ್ವೆ ನಡೆಸಿರುವುದು ಅವರ ಈ ಸಂಶಯಕ್ಕೆ ಕಾರಣವಾಗಿದೆ. ನಗರದ ಕೇಂದ್ರ ಸ್ಥಾನದಲ್ಲಿ ನಿರ್ಮಾಣಗೊಳ್ಳುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎದುರಿಗೇ ಬಡ ಮಕ್ಕಳು ಕಲಿಯುವ ಶಾಲೆಯೊಂದು ಇರುವುದನ್ನು ಯಾವುದೇ ಉದ್ಯಮಿ ಖಂಡಿತ ಇಷ್ಟ ಪಡಲಾರ ಎಂಬುದು ಅವರ ಈ ಸಂಶಯಕ್ಕೆ ಕಾರಣವಾಗಿದೆ. ಈ ಶಾಲೆಯ ಎತ್ತಂಗಡಿಗೆ ಈ ಮೊದಲೇ ಪ್ರಯತ್ನಗಳು ನಡೆದಿದ್ದವು. ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್, ಉದ್ಯಮಿ ತಲ್ಲೂರು ಶಿವರಾಮ ಶೆಟ್ಟಿ (ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಈಗಿನ ಅಧ್ಯಕ್ಷರು) ಅವರು ಕಲಿತ ಈ ಶಾಲೆ, ಕೆಲವರ ಅವಿರತ ಪ್ರಯತ್ನದಿಂದ ಅದು ಈವರೆಗೆ ಸಾಧ್ಯವಾಗಿರಲಿಲ್ಲ.

ಇಕ್ಕಟ್ಟಾದ ಶಾಲೆ

ಇಲ್ಲಿ ಒಂದರಿಂದ 7ರವರೆಗೆ ತರಗತಿಗಳು ನಡೆಯುತಿದ್ದರು ಇರುವುದು ಎರಡು ಹಾಲ್‌ಗಳು ಮಾತ್ರ. ಪಕ್ಕದ ಇನ್ನೊಂದು ವಿಶಾಲ ಹಾಲ್‌ನಲ್ಲಿ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಯಾಚರಿಸುತ್ತಿತ್ತು. ಇತ್ತೀಚೆಗೆ ಬಿಇಒ ಕಚೇರಿ, ಬೋರ್ಡ್ ಹೈಸ್ಕೂಲ್ ಆವರಣದೊಳಗಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಿದ್ದರೂ, ಆ ಹಾಲ್ ಶಾಲೆಗೆ ಇನ್ನೂ ಹಸ್ತಾಂತರವಾಗಿಲ್ಲ. ಇಕ್ಕಟ್ಟಾದ ಎರಡು ಹಾಲ್‌ನಲ್ಲೇ ಏಳು ತರಗತಿಗಳು, ಅಧ್ಯಾಪಕರ ಕೊಠಡಿ, ಅಡಿಗೆಕೋಣೆ, ಅಂಗನವಾಡಿ ಎಲ್ಲವೂ ನಡೆಯುತ್ತಿವೆ.

ಶಾಲೆ ಇರುವ ಜಾಗದ ಆರ್‌ಟಿಸಿಯಲ್ಲಿ ಇನ್ನೂ ಸರಕಾರದ ಹೆಸರಿದೆ. ಅದಿನ್ನೂ ಶಾಲೆಯ ಹೆಸರಿಗೆ ನೊಂದಾವಣಿಯಾಗಿಲ್ಲ. ಈ ಬಗ್ಗೆ ನಡೆಸಿದ ಪ್ರಯತ್ನ ಇದುವರೆಗೆ ಸಫಲವಾಗಿಲ್ಲ. ಹೀಗಾಗಿ ಸರಕಾರ ಇದೇ ಸಂದರ್ಭವನ್ನು ಬಳಸಿಕೊಂಡು ಶಾಲೆಯನ್ನು ಎತ್ತಂಗಡಿ ಮಾಡಿ ಜಾಗವನ್ನು ಖಾಸಗಿ ಆಸ್ಪತ್ರೆಗೆ ನೀಡುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯ ಇಲ್ಲ ಎಂಬುದು ಶಾಲೆಯ ಹಳೆವಿದ್ಯಾರ್ಥಿಗಳ ಚಿಂತೆಗೆ ಕಾರಣವಾಗಿದೆ.

1885ರಲ್ಲಿ ಹಾಜಿ ಅಬ್ದುಲ್ಲ ಟ್ರಸ್ಟ್ ನೀಡಿದ ಜಾಗದಲ್ಲಿ ಶಾಲೆಯನ್ನು ಆಗಿನ ಬ್ರಿಟಿಷ್ ಸರಕಾರ ಸ್ಥಾಪಿಸಿತ್ತು. ದಾನ ಪತ್ರದಲ್ಲಿ ಈ ಜಾಗದಲ್ಲಿ ಸರಕಾರಿ ಶಾಲೆ ಮಾತ್ರ ಇರಬೇಕು. ಒಂದು ವೇಳೆ ಅದನ್ನು ಮುಚ್ಚಿದರೆ ಟ್ರಸ್ಟ್‌ಗೆ ಹಿಂದಿರುಗಿಸಬೇಕು ಎಂದು ಬರೆಯಲಾಗಿದೆ ಎಂದು ಹೇಳಲಾಗುತ್ತಿದ್ದು, ಇದೀಗ ನಾಪತ್ತೆಯಾಗಿರುವ ದಾನಪತ್ರಕ್ಕಾಗಿ ಸಂಬಂಧಿಸಿದವರು ಹುಡುಕಾಟ ನಡೆಸುತಿದ್ದಾರೆ. ಇಲ್ಲದಿದ್ದರೆ ಟ್ರಸ್ಟ್‌ನ ಸಂಬಂಧಿಕರನ್ನು ಹುಡುಕಿ ಅವರ ಮೂಲಕವಾದರೂ ಶಾಲೆಯನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕೆಲವರು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News