×
Ad

ಕುದುರೆ ಗಾಡಿಯಲ್ಲಿ ಹೆರಿಗೆ!

Update: 2016-09-26 23:29 IST

 ಬರೇಲಿ, ಸೆ.26: ಗ್ರಾಮೀಣ ಭಾರತದ ಆರೋಗ್ಯ ಕಾಳಜಿ ವ್ಯವಸ್ಥೆ ಕಳಪೆಯಾಗಿರುವುದಕ್ಕೆ ಮತ್ತೊಂದು ನಿದರ್ಶನ. ಗ್ರಾಮೀಣ ಭಾಗದಲ್ಲಿ ಗರ್ಭಿಣಿ ಮಹಿಳೆಯರ ಜೀವಕ್ಕೆ ಅಪಾಯ ಇರುವುದಕ್ಕೆ ಕನ್ನಡಿ ಹಿಡಿಯುವ ಘಟನೆ. ಗರ್ಭಿಣಿಯನ್ನು ಕರೆದೊಯ್ಯಲು ಗ್ರಾಮದಲ್ಲಿ ಆ್ಯಂಬುಲೆನ್ಸ್ ದೊರೆಯದ ಕಾರಣ ಆಕೆಯನ್ನು ಕರೆದೊಯ್ಯುತ್ತಿದ್ದ ಕುದುರೆಗಾಡಿಯಲ್ಲೇ ಹೆರಿಗೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಜಿಲ್ಲೆಯ ಮೀರ್‌ಗಂಜ್ ಸಮುದಾಯ ಆರೋಗ್ಯ ಕೇಂದ್ರದ ಎದುರು ಈ ಘಟನೆ ಸಂಭವಿಸಿದೆ. ಇಂತಹ ಪ್ರಕರಣಗಳಲ್ಲಿ ಆಶಾ ಕಾರ್ಯಕರ್ತೆಯರು ಗರ್ಭಿಣಿ ಜತೆಗೆ ಹಳ್ಳಿಯಿಂದ ಆಗಮಿಸಿ ಆಸ್ಪತ್ರೆಗೆ ಸೇರಿಸಬೇಕು. ಇದೀಗ ಆಶಾ ಕಾರ್ಯಕರ್ತೆಯರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ 102/108 ದೂರವಾಣಿ ಸಂಖ್ಯೆಗೆ ಕರೆ ಮಾಡಿದರೂ ಆ್ಯಂಬುಲೆನ್ಸ್ ದೊರಕಲಿಲ್ಲವೆಂದು ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಅಮಿತ್ ಕುಮಾರ್ ವಿವರಿಸಿದ್ದಾರೆ.
ವೈದ್ಯಕೀಯ ನಿರ್ಲಕ್ಷ ಆರೋಪದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿಜಯ್ ಯಾದವ್ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಮುಂಜಾನೆ 5 ಗಂಟೆ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಆ್ಯಂಬುಲೆನ್ಸ್ ದೊರಕಲಿಲ್ಲ. ಆದ್ದರಿಂದ ಕುದುರೆಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆವು. ಆಸ್ಪತ್ರೆಗೆ ತಲುಪಿದಾಗ ಆಶಾ ಕಾರ್ಯಕರ್ತೆಯರು ಮುಷ್ಕರದಲ್ಲಿರುವುದು ತಿಳಿದುಬಂತು. ಆದರೆ ಆಸ್ಪತ್ರೆ ಸಿಬ್ಬಂದಿ ಲಭ್ಯವಿದ್ದರು. ಆದರೆ ಮಹಿಳೆಯನ್ನು ಆಸ್ಪತ್ರೆಗೆ ಒಯ್ಯುವಷ್ಟು ಸಮಯಾವಕಾಶ ಇರಲಿಲ್ಲ. ಇದರಿಂದ ಕುದುರೆ ಗಾಡಿಯಲ್ಲೇ ಆಸ್ಪತ್ರೆ ಸಿಬ್ಬಂದಿ ಹೆರಿಗೆ ಮಾಡಿಸಿದರು ಎಂದು ಗರ್ಭಿಣಿ ಮಹಿಳೆ ಪ್ರೇಮಾವತಿಯವರ ಅಕ್ಕ ಶಾಂತಿ ತಿಳಿಸಿದರು.

 ಆದರೆ ಆಡಳಿತ ಯಂತ್ರ ನಮ್ಮ ಮೇಲೆ ಗೂಬೆ ಕೂರಿಸಲು ಹೊರಟಿದೆ. ಕುಟುಂಬದವರು ಆ್ಯಂಬುಲೆನ್ಸ್‌ಗೆ ಕರೆ ಮಾಡಿದಾಗ, ಆಸ್ಪತ್ರೆಯವರು ಕರೆ ಸ್ವೀಕರಿಸಿರುವ ಸಾಧ್ಯತೆ ಇಲ್ಲ ಎಂದು ಜಿಲ್ಲಾ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಗಂಗ್ವಾರ್ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News