ರಾಜ್ಯ ಸರಕಾರದ 3 ವರ್ಷಗಳ ಸಾಧನೆ: ವಿವಿಧ ಯೋಜನೆಗಳು

Update: 2016-09-27 09:29 GMT

ಮಂಗಳೂರು, ಸೆ.26: ಅನ್ನಭಾಗ್ಯದಡಿ ನೀಡುವ ಸೀಮೆಎಣ್ಣೆ ಹೆಚ್ಚಿಸಿ, ಕ್ಷೀರ ಭಾಗ್ಯ ಅನುದಾನಿತ ಶಾಲಾ ಮಕ್ಕಳಿಗೂ ದೊರೆಯಲಿ, ಹಣ್ಣುಹಂಪಲುಗಳನ್ನೂ ನೀಡಿ, ಮನಸ್ವಿನಿ ಯೋಜನೆಯಡಿ ಪಿಂಚಣಿ ಹಣ ಹೆಚ್ಚಿಸಿ, ಲಿಂಗ ಅಲ್ಪಸಂಖ್ಯಾತರಿಗೆ ಮೈತ್ರಿ ಯೋಜನೆ ಜತೆ ಆಶ್ರಯದ ವ್ಯವಸ್ಥೆಯಾಗಲಿ, ಬಿದಾಯಿ ಯೋಜನೆ ಇನ್ನಷ್ಟು ಅರ್ಹ ಫಲಾನುಭವಿಗಳಿಗೆ ತಲುಪಲಿ, ಹರೀಶ್ ಸಾಂತ್ವನ ಯೋಜನೆಯ ಬಗ್ಗೆ ಆ್ಯಂಬುಲೆನ್ಸ್‌ನಲ್ಲಿ ಮಾಹಿತಿ ನೀಡಿ, ಮತ್ಸಾಶ್ರಯದ ಸಹಾಯಧನ ಹೆಚ್ಚಿಸಿ.

ಇದು ರಾಜ್ಯ ಸರಕಾರದ ವಿವಿಧ ಯೋಜನೆಗಳಡಿ ಪ್ರಯೋಜನ ಪಡೆದುಕೊಂಡಿರುವ ಫಲಾನುಭವಿಗಳಿಂದ ವ್ಯಕ್ತವಾದ ಬೇಡಿಕೆಗಳು.

ರಾಜ್ಯ ಸರಕಾರದ ಮೂರು ವರ್ಷಗಳ ಸಾಧನೆ ಹಾಗೂ ವಿವಿಧ ಯೋಜನೆಗಳ ಕುರಿತಂತೆ ಮಾಹಿತಿ ನೀಡುವ ನಿಟ್ಟಿನಲ್ಲಿ ನಗರದ ಪುರಭವನದಲ್ಲಿ ಇಂದು ಆಯೋಜಿಸಲಾದ ಜಿಲ್ಲಾ ಮಟ್ಟದ ಜನಮನ ಕಾರ್ಯಕ್ರಮದಲ್ಲಿ ಫಲಾನುಭವಿಗಳು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಜತೆ ಸಂವಾದ ನಡೆಸುವ ಮೂಲಕ ಗಮನ ಸೆಳೆದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಸಚಿವರ ಎದುರಲ್ಲಿ ಕುಳಿತುಕೊಂಡೇ ವಿವಿಧ ಯೋಜನೆಗಳ ಫಲಾನುಭವಿಗಳು ಯೋಜನೆಗಳಿಂದ ತಮಗಾದ ಪ್ರಯೋಜನದ ಜತೆಗೆ ತಮ್ಮ ಬೇಡಿಕೆಯನ್ನೂ ಮುಂದಿಟ್ಟರು.

ವಿದ್ಯಾಸಿರಿ ಯೋಜನೆಯ ಕುರಿತಂತೆ ಅನುಭವ ಹಂಚಿಕೊಂಡ ವಿದ್ಯಾರ್ಥಿಗಳಲ್ಲಿ ಓರ್ವರಾದ ಡೇಲನ್ ಎಂಬವರು ಮಾತನಾಡುತ್ತಾ, ಈ ಯೋಜನೆಯ ಕುರಿತಂತೆ ಸೂಕ್ತ ಪ್ರಚಾರದ ಮೂಲಕ ಇನ್ನಷ್ಟು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲು ಸರಕಾರ ವ್ಯವಸ್ಥೆ ಮಾಡಬೇಕು ಎಂದರು. ಅನ್ನ ಭಾಗ್ಯ ಯೋಜನೆಯಡಿ ಸೀಮೆಎಣ್ಣೆಯ ಪ್ರಮಾಣವನ್ನು ಹೆಚ್ಚಿಸಿ ಎಂಬ ಬೇಡಿಕೆ ಕುಪ್ಪೆಪದವಿನ ಅಹ್ಮದ್ ಬಾವಾ ಎಂಬವರದ್ದಾಗಿತ್ತು. ಪಡಿತರ ಕೂಪನ್ ವ್ಯವಸ್ಥೆ ಅಗತ್ಯವಿಲ್ಲ ಎಂಬ ಆಕ್ಷೇಪದ ಜತೆಗೆ ಆನ್‌ಲೈನ್ ಕೂಪನ್ ವ್ಯವಸ್ಥೆಯನ್ನು ಮಾಡಬೇಕೆಂಬ ಬೇಡಿಕೆಯೂ ಫಲಾನುಭವಿಗಳಿಂದ ವ್ಯಕ್ತವಾಯಿತು.

ಕ್ಷೀರ ಭಾಗ್ಯ ಯೋಜನೆಯಡಿ ಮಕ್ಕಳಿಗೆ ಪೌಷ್ಠಿಕ ಆಹಾರ ದೊರೆಯುವಂತಾಗಿದೆ. ಹಾಲಿನ ಜತೆ ಹಣ್ಣು ಹಂಪಲುಗಳನ್ನೂ ನೀಡಬೇಕು ಎಂದು ಅತ್ತಾವರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಯೋಗೀಶ್‌ನ ಆಗ್ರಹವಾದರೆ, ಅನುದಾನಿತ ಶಾಲೆಗಳಿಗೂ ಕ್ಷೀರ ಭಾಗ್ಯ ದೊರೆಯಲಿ ಎಂಬ ಬೇಡಿಕೆಯನ್ನು ಪಾಂಡೇಶ್ವರ ದ.ಕ.ಜಿ.ಪಂ. ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕ ಮಂಡಿಸಿದರು.

ಅಪ್ಪ, ಅಮ್ಮ ಇಲ್ಲದೆ, ತಮ್ಮನ ಜತೆ ಆಶ್ರಯ ಮಾಡಿಕೊಂಡಿರುವ ಅವಿವಾಹಿತೆಯಾದ ತನಗೆ ಮನಸ್ವಿನಿ ಯೋಜನೆಯಡಿ ಸಿಗುವ ಮಾಸಿಕ ಪಿಂಚಣಿ 500 ರೂ. ಬಹಳಷ್ಟು ಉಪಯೋಗವಾಗುತ್ತಿದೆ. ಈ ಮೊತ್ತವನ್ನು ಇನ್ನಷ್ಟು ಏರಿಸಿದರೆ, ಮತ್ತಷ್ಟು ಉಪಯೋಗವಾಗಬಹುದು ಎಂಬ ಆಗ್ರಹ ಪುಷ್ಪಾ ಎಂಬವರದ್ದಾಗಿತ್ತು. ಮಂಗಳಮುಖಿಯರಿಗೆ ಮೈತ್ರಿ ಯೋಜನೆಯಡಿ ಸಿಗುವ ಪಿಂಚಣಿಯಿಂದ ಪ್ರಯೋಜನವಾಗಿದೆ. ಆದರೆ ಆಶ್ರಯದ ವ್ಯವಸ್ಥೆ ಇಲ್ಲದೆ ಮಂಗಳಮುಖಿಯರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬ ಆಗ್ರಹ ಪ್ರೇಮಾ ಹಾಗೂ ಯೋಜನೆಯ ಇತರ ಫಲಾನುಭವಿಗಳದ್ದಾಗಿತ್ತು. ಗಂಡನನ್ನು ಕಳೆದುಕೊಂಡು ಮಗಳ ಮದುವೆ ತೀರಾ ಸಂಕಷ್ಟದಲ್ಲಿದ್ದ ತನಗೆ ಸರಕಾರದ ಬಿದಾಯಿ ಯೋಜನೆಯಡಿ ದೊರಕಿದ ಸಹಾಯಧನ ಬಹಳಷ್ಟು ನೆರವು ನೀಡಿದೆ. ಇನ್ನಷ್ಟು ಫಲಾನುಭವಿಗಳಿಗೆ ಈ ಯೋಜನೆ ಲಭ್ಯವಾಗುವ ಮೂಲಕ ಬಡ ಹೆಣ್ಣು ಮಕ್ಕಳ ಬಾಳು ಹಸನಾಗಲಿ ಎಂದು ಪೌಲಿನ್ ಡಿಸೋಜಾ ಆನಂದ ಬಾಷ್ಪದೊಂದಿಗೆ ಅನುಭವ ಹಂಚಿಕೊಂಡರು.

ಹೀಗೆ ಸಂವಾದದಲ್ಲಿ ಹರೀಶ್ ಸಾಂತ್ವಾನ ಯೋಜನೆ, ಮತ್ಸಾಶ್ರಯ ಸೇರಿದಂತೆ 20 ವಿವಿಧ ಯೋಜನೆಗಳಡಿ ಪ್ರಯೋಜನ ಪಡೆದ ಆಯ್ದ ಫಲಾನುಭವಿಗಳು ಸಚಿವರ ಜತೆ ಸಂವಾದ ನಡೆಸಿದರು. ಕ್ಷೀರ ಭಾಗ್ಯ ಯೋಜನೆ ಕುರಿತಂತೆ ಅಂಗನವಾಡಿ ಪುಟಾಣಿಗಳು ಕೂಡಾ ತಮ್ಮ ಶಿಕ್ಷಕರು ಹೇಳಿಕೊಟ್ಟಂತೆ ವೇದಿಕೆಯಲ್ಲಿ ಸಚಿವರ ಜತೆ ಸಂವಾದ ನಡೆಸಿದ ಪ್ರಸಂಗವೂ ಕಾರ್ಯಕ್ರಮದಲ್ಲಿ ನಡೆಯಿತು.

ಪ್ರತಿ ಯೋಜನೆಯ ಫಲಾನುಭವಿಗಳ ಸಂವಾದದ ಬಳಿಕ ಬೇಡಿಕೆಗಳಿಗೆ ಪ್ರತಿಕ್ರಿಯಿಸುತ್ತಾ ಸರಕಾರಿ ಮಟ್ಟದಲ್ಲಿ ಅವುಗಳ ಈಡೇರಿಕೆಗೆ ಪ್ರಯತ್ನ ಮಾಡುವುದಾಗಿ ಸಚಿವ ರೈ ಭರವಸೆ ನೀಡಿದರು.

ವಿದ್ಯಾಸಿರಿ ಯೋಜನೆಯಡಿ ಹಿಂದುಳಿದ ವರ್ಗಗಳ 5359 ವಿದ್ಯಾರ್ಥಿಗಳಿಗೆ 340.45 ಲಕ್ಷ ರೂ., ಹಾಗೂ ಅಲ್ಪಸಂಖ್ಯಾತ ವಿಭಾಗದ 7,614 ವಿದ್ಯಾರ್ಥಿಗಳಿಗೆ 456.84 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಅನ್ನಭಾಗ ಯೋಜನೆಯಡಿ 13-14ನೆ ಸಾಲಿನಲ್ಲಿ 34 ಕೋಟಿ ರೂ., 14-15ನೆ ಸಾಲಿನಲ್ಲಿ 43.62 ಕೋಟಿ ರೂ. ಹಾಗೂ 15-16ನೆ ಸಾಲಿನಲ್ಲಿ 30.28 ಕೋಟಿ ರೂ.ಗಳನ್ನು ಸಬ್ಸಿಡಿಯಾಗಿ ಒದಗಿಸಲಾಗಿದೆ ಎಂದು ಸಚಿವ ರೈ ತಿಳಿಸಿದರು. ಕ್ಷೀರಭಾಗ್ಯ ಯೋಜನೆಯಡಿ ಜಿಲ್ಲೆಲ್ಲಿ 2,102 ಅಂಗನವಾಡಿಗಳ 1,09,279 ಮಕ್ಕಳಿಗೆ ಹಾಲು ನೀಡಲಾಗುತ್ತಿದ್ದು, ಕ್ಷೀರ ಧಾರ ಯೋಜನೆಯಡಿ 13-14ನೆ ಸಾಲಿನಲ್ಲಿ 18.78 ಕೋಟಿ ರೂ., 14-15ನೆ ಸಾಲಿನಲ್ಲಿ 22.98 ಕೋಟಿ ರೂ., 15-16ನೆ ಸಾಲಿನಲ್ಲಿ 27.68 ಕೋಟಿ ರೂ. ಸಬ್ಸಿಡಿಯನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಆಡಳಿತಕ್ಕೆ ಬಂದ ಮೂರು ವರ್ಷಗಳ ಅವಧಿಯಲ್ಲಿ ವಿವಿಧ ಯೋಜನೆಗಳ ಮೂಲಕ ಕರ್ನಾಟಕವನ್ನು ಋಣಮುಕ್ತ ರಾಜ್ಯವನ್ನಾಗಿಸುವ ಜತೆಗೆ, ಜನಸಾಮಾನ್ಯರಿಗೆ ಸ್ವಾಭಿಮಾನದ ಬದುಕಿಗೆ ಪೂರಕವಾದ ಯೋಜನೆಗಳ ಯಶಸ್ವಿಯಾಗಿ ಜಾರಿಗೊಳಿಸಿ, ಪ್ರಣಾಳಿಕೆಯಲ್ಲಿ ನೀಡಲಾದ ಆಶ್ವಾಸನೆಗಳಲ್ಲಿ ಶೇ. 85ರಷ್ಟನ್ನು ಪೂರೈಸಲಾಗಿದೆ ಎಂದು ಸಚಿವ ರೈ ಹೇಳಿದರು.

ಉದ್ಘಾಟನಾ ಸಮಾರಂಭದ ವೇಳೆ ವೇದಿಕೆಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಅಭಯ ಚಂದ್ರ ಜೈನ್, ಶಾಸಕ ಮೊಯ್ದಿನ್ ಬಾವ, ಮೇಯರ್ ಹರಿನಾಥ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ, ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕವಿತಾ ಸನಿಲ್, ಲ್ಯಾನ್ಸಿ ಲೋಟ್ ಪಿಂಟೋ, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್, ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಮೊದಲಾದವರು ಉಪಸ್ಥಿತರಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News