ಟಿವಿ ವಾಹಿನಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಕಾಂಗ್ರೆಸ್ !

Update: 2016-09-27 13:16 GMT

ಹೊಸದಿಲ್ಲಿ,ಸೆ.27: ತನ್ನ ರ್ಯಾಲಿಯಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಲಾ ಗಿತ್ತೆಂಬ ಸುಳ್ಳು ಮತ್ತು ದುರುದ್ದೇಶಪೂರಿತ ಸುದ್ದಿಯನ್ನು ಪ್ರಸಾರ ಮಾಡಿದ್ದಕ್ಕಾಗಿ ಆರೆಸ್ಸೆಸ್ ಮುಖವಾಣಿಯೆನ್ನಲಾದ ಸುದ್ದಿ ವಾಹಿನಿ ಸೇರಿದಂತೆ ಎರಡು ಟಿವಿ ವಾಹಿನಿಗಳಿಗೆ ತಾನು ಕಾನೂನು ನೋಟಿಸನ್ನು ಕಳುಹಿಸುತ್ತಿರುವುದಾಗಿ ಕಾಂಗ್ರೆಸ್ ಪಕ್ಷವು ಹೇಳಿದೆ.

ಈ ಸಂಬಂಧ ಸರಣಿ ಟ್ವೀಟ್‌ಗಳನ್ನು ಮಾಡಿರುವ ಕಾಂಗ್ರೆಸ್‌ನ ಸಂಪರ್ಕ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜೆವಾಲಾ ಅವರು, ಸುದ್ದಿವಾಹಿನಿಗಳಾದ ಸಮಾಚಾರ ಪ್ಲಸ್ ಮತ್ತು ಸುದರ್ಶನ ಟಿವಿ ಕಾಂಗ್ರೆಸ್ ವಿರುದ್ಧ ಸುಳ್ಳು ಸುದ್ದಿಗಳನ್ನು ಪ್ರಸಾರಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಪಕ್ಷದ ರ್ಯಾಲಿಯೊಂದರಲ್ಲಿ ಪಾಕ್ ಪರ ಘೋಷಣೆಗಳನ್ನು ಕೂಗಲಾಗಿತ್ತು ಎಂಬ ಸುಳ್ಳು ಮತ್ತು ದುರುದ್ದೇಶಪೂರಿತ ಸುದ್ದಿಗಳನ್ನು ಪ್ರಸಾರಿಸು ತ್ತಿರುವವರಿಗೆ ಕಾನೂನು ನೋಟಿಸುಗಳನ್ನು ಕಳುಹಿಸುತ್ತಿದ್ದೇವೆ. ಇಂತಹ ಕೃತ್ಯಗಳ ಮೂಲಕ ಪಕ್ಷದ ವರ್ಚಸ್ಸಿಗೆ ಹಾನಿಯುಂಟು ಮಾಡಲು ಯತ್ನಿಸುವವರ ವಿರುದ್ಧ ಕಾನೂನು ಕ್ರಮವನ್ನೂ ಪಕ್ಷವು ಪರಿಶೀಲಿಸಲಿದೆ ಎಂದು ಹೇಳಿದ್ದಾರೆ.

ಮೊರಾದಾಬಾದ್‌ನಲ್ಲಿ ಇತ್ತೀಚಿಗೆ ಕಾಂಗ್ರೆಸ್ ಪಕ್ಷದ ರ್ಯಾಲಿಯಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಲಾಗಿತ್ತು ಎಂದು ವರದಿ ಮಾಡಿದ್ದ ಉತ್ತರ ಪ್ರದೇಶದ ಪ್ರಾದೇಶಿಕ ವಾಹಿನಿ ಸಮಾಚಾರ ಪ್ಲಸ್ ಅದಕ್ಕೆ ಸಂಬಂಧಿಸಿದಂತೆ ವೀಡಿಯೊವೊಂದನ್ನು ತೋರಿಸಿತ್ತು.

ಆದರೆ ವಾಹಿನಿ ಹೇಳಿದಂತೆ ಪಾಕ್ ಪರ ಘೋಷಣೆಗಳು ಈ ವೀಡಿಯೊದಲ್ಲಿ ಕೇಳಿಬಂದಿರಲಿಲ್ಲ

ಸುದರ್ಶನ ಟಿವಿಯನ್ನು ಆರೆಸ್ಸೆಸ್ ಮುಖವಾಣಿಯೆಂದು ಇತ್ತೀಚಿಗೆ ಹೇಳಿದ ಆಮ್ ಆದ್ಮಿ ಪಾರ್ಟಿಯು ಅದನ್ನು ಬಹಿಷ್ಕರಿಸಿದೆ.

ಮೊರಾದಾಬಾದ್ ಪೊಲೀಸರು ರವಿವಾರ ಜಿಲ್ಲಾ ಮತ್ತು ನಗರ ಕಾಂಗ್ರೆಸ್ ಘಟಕಗಳ ಅಧ್ಯಕ್ಷರು ಹಾಗೂ ಪಕ್ಷದ ಹಲವಾರು ಕಾರ್ಯಕರ್ತರ ವಿರುದ್ಧ ದೇಶದ್ರೋಹದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News