ಕೇರಳ ಮೂಲದ ವೈದ್ಯ ಲಢಾಕ್‌ನಲ್ಲಿ ಮೃತ್ಯು
ಮಂಗಳೂರು, ಸೆ.27: ಕೇರಳ ಮೂಲದ ವೈದ್ಯನೋರ್ವ ಲಢಾಕ್‌ನಲ್ಲಿ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಮೃತರನ್ನು ಕೇರಳ ಜಿಲ್ಲೆಯ ಆಲಪ್ಪುಲದ ಹರಿಪ್ಪಾಡ್ ನಿವಾಸಿ ಡಾ.ಮುಹಮ್ಮದ್ ಇರ್ಷಾದ್ (23) ಎಂದು ಗುರುತಿಸಲಾಗಿದೆ.
ಅವರು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆಂದು ಹೇಳಲಾಗಿದೆ. ಇಂದು ಸಂಜೆ ಅವರ ಮೃತದೇಹವು ಹುಟ್ಟೂರಿಗೆ ತಲುಪಿದ್ದು, ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಇರ್ಷಾದ್ ಎಂಬಿಬಿಎಸ್ ಕೋರ್ಸ್ ಪೂರ್ಣಗೊಳಿಸಿದ್ದು, ಮಂಗಳೂರಿನ ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ಇಂಟರ್ನ್‌ಶಿಪ್ ಕೂಡ ಮಾಡಿದ್ದರೆಂದು ಮೂಲಗಳು ತಿಳಿಸಿವೆ.
ಸೆಪ್ಟಂಬರ್ 18ರಂದು ಹರಿಪ್ಪಾಡ್‌ನ ತನ್ನ ಮನೆಯಿಂದ ಸ್ನೇಹಿತರೊಂದಿಗೆ ಲಢಾಖ್‌ಗೆ ಹೊರಟಿದ್ದರು. ತೀವ್ರ ಚಳಿ ಹಾಗೂ ಹವಾಮಾನ ವೈಪ್ಯರೀತ್ಯದಿಂದಾಗಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿತ್ತು. ಉಸಿರಾಟದ ಸಮಸ್ಯೆ ಉಲ್ಬಣಗೊಂಡಾಗ ಸೋಮವಾರ ಅವರಿಗೆ ಅಲ್ಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸಂಜೆ ಹೊತ್ತಿಗೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿದುಬಂದಿದೆ.
ಮೃತರ ತಂದೆ ಉಸ್ಮಾನ್ ಕುಟ್ಟಿ ಎಂಬವರು ಸೌದಿಯಲ್ಲಿ ಉದ್ಯೋಗದಲ್ಲಿದ್ದು, ಮಗನ ಸಾವಿನ ಸುದ್ದಿ ಕೇಳಿ ಊರಿಗೆ ಧಾವಿಸಿದ್ದಾರೆ. ಇಂದು ಇಶಾ ನಮಾಝಿನ ಮುಂಚೆ ನಡೆದ ಅಂತ್ಯಸಂಸ್ಕಾರದಲ್ಲಿ ಅವರು ಪಾಲ್ಗೊಂಡಿದ್ದಾರೆ.
ಮೃತರು ತಂದೆ, ತಾಯಿ, ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿ ಸಹಿತ ಬಂಧು, ಮಿತ್ರರನ್ನು ಅಗಲಿದ್ದಾರೆ. ಮೃತ ಇರ್ಷಾದ್ ಅವರು ಎರ್ನಾಕುಲಂನ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದಿದ್ದು, ಮುಂದಿನ ತಿಂಗಳಲ್ಲಿ ಸೇವೆಗೆ ಹಾಜರಾಗಲಿದ್ದರೆಂದು ಮೂಲಗಳು ತಿಳಿಸಿವೆ.