×
Ad

ಕಾಶ್ಮೀರ ಪ್ರತಿಭಟನಾಕಾರರಿಂದ ಕಲ್ಲು ತೂರಾಟ: ಮಹಿಳೆ ಸಾವು,ಇಬ್ಬರಿಗೆ ಗಾಯ

Update: 2016-09-27 19:17 IST

ಶ್ರೀನಗರ,ಸೆ.27: ಪ್ರತ್ಯೇಕತಾವಾದಿಗಳ ಆದೇಶವನ್ನು ಉಲ್ಲಂಘಿಸಿ ಇಂದು ರಸ್ತೆಗಿಳಿದಿದ್ದ ವಾಹನಗಳನ್ನು ಗುರಿಯಾಗಿಸಿಕೊಂಡು ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ದ್ದರಿಂದ ಓರ್ವ ಮಹಿಳೆ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಇಲ್ಲಿಯ ಪಾರಿಂಪೋರಾದಲ್ಲಿ ಕಲ್ಲು ತೂರಾಟಕ್ಕೆ ಗುರಿಯಾದ ಎಸ್‌ಯುವಿ ವಾಹನದ ಚಾಲಕ ದಾಳಿಯನ್ನು ತಪ್ಪಿಸಲು ಏಕಾಏಕಿ ಹಿಂದಕ್ಕೆ ಚಲಾಯಿಸಿದ್ದರಿಂದ ಸೋದರಿಯರಾದ ಫೋಝಿಯಾ(20) ಮತ್ತು ನಾಡಿಯಾ(18) ಗಂಭಿರವಾಗಿ ಗಾಯಗೊಂಡಿದ್ದರು. ಈ ಪೈಕಿ ಫೋಝಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸ್ ವಕ್ತಾರರು ತಿಳಿಸಿದರು.

ಪ್ರತಿಭಟನಾಕಾರರು ಈ ಎಸ್‌ಯುವಿ ಸರಕಾರಿ ವಾಹನವೆಂದು ಭಾವಿಸಿ ಕಲ್ಲು ತೂರಾಟ ನಡೆಸಿದ್ದರೆನ್ನಲಾಗಿದೆ. ಸಫಾ ಕಡಲ್ ಪ್ರದೇಶದಲ್ಲಿ ಸ್ಕೂಟಿ ಸವಾರನೋರ್ವ ಕಲ್ಲು ತೂರಾಟಗಾರರ ದಾಳಿಯಿಂದ ಗಾಯಗೊಂಡಿದ್ದಾನೆ. ತಲೆಗೆ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿಝ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರವು ಅಶಾಂತಿಯ ಬೇಗುದಿಯಲ್ಲಿ ಬೇಯುತ್ತಿದೆ. ಪ್ರತ್ಯೇಕತಾವಾದಿಗಳು ಸಂಜೆಯ ಕೆಲವು ಗಂಟೆಗಳನ್ನು ಹೊರತುಪಡಿಸಿ ಪ್ರತಿ ದಿನ ಬಂದ್‌ಗೆ ಕರೆ ನೀಡುತ್ತಿದ್ದು, ಮನೆಗಳಿಂದ ಹೊರಗೆ ಬರದಂತೆ ಜನರಿಗೆ ಆದೇಶಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News