ಪುತ್ತೂರು: ಅಂಗಡಿ ಮುಂಭಾಗದಲ್ಲಿ ಮಾಲಕನ ಮೃತದೇಹ ಪತ್ತೆ; ಕೊಲೆ ಶಂಕೆ
ಪುತ್ತೂರು, ಸೆ.27: ಅಂಗಡಿ ಮಾಲಕರೋರ್ವರ ಮೃತದೇಹವು ಅವರ ಅಂಗಡಿ ಜಗುಲಿಯಲ್ಲೇ ರಕ್ತಸಿಕ್ತವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡು ಬಂದರೂ ಕೊಲೆ ನಡೆದಿರುವ ಕುರಿತು ಶಂಕೆ ವ್ಯಕ್ತವಾಗಿದೆ.
ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಪಯಂದೂರು ನಿವಾಸಿ ಫಕೀರಪ್ಪ ರೈ (65) ಮೃತಪಟ್ಟ ವ್ಯಕ್ತಿ. ಅವರು ಇದೇ ಗ್ರಾಮದ ಜಾರತ್ತಾರು ಎಂಬಲ್ಲಿ ಅಂಗಡಿಯನ್ನು ಹೊಂದಿದ್ದು ಕಳೆದ 45 ವರ್ಷಗಳಿಂದ ಅಂಗಡಿ ವ್ಯಾಪಾರ ಮಾಡುತ್ತಿದ್ದರು.ಹೆಚ್ಚಾಗಿ ಅಂಗಡಿಯಲ್ಲೇ ರಾತ್ರಿ ವೇಳೆ ಮಲಗುತ್ತಿದ್ದರು. ರವಿವಾರ ಮತ್ತು ಸೋಮವಾರ ಇವರು ಮನೆಗೆ ಹೋಗಿರಲಿಲ್ಲ. ಮಂಗಳವಾರ ಮಧ್ಯಾಹ್ನ ಅಂಗಡಿಗೆ ಗ್ರಾಹಕರೋರ್ವರು ತೆರಳಿದ ವೇಳೆ ಅಂಗಡಿಯ ಬಾಗಿಲು ಮುಚ್ಚಿದ್ದು ಅವರು ಜಗಲಿಯಲ್ಲೇ ಶವವಾಗಿದ್ದರು. ದೇಹದ ಮೇಲೆ ರಕ್ತದ ಕಲೆಯಿದ್ದು ಮೈಮೇಲೆ ಕೇವಲ ಲುಂಗಿ ಮಾತ್ರ ಇತ್ತು. ಅಂಗಡಿಯ ಬಾಗಿಲಿಗೆ ಬೀಗ ಹಾಕಲಾಗಿತ್ತು ಎನ್ನಲಾಗಿದೆ. ಅಂಗಡಿ ಬೀಗ ಹಾಕಿದ್ದ ಕಾರಣ ಯಾರೂ ಇಲ್ಲಿಗೆ ಆಗಮಿಸದಿರುವುದರಿಂದ ಇವರು ಯಾವಾಗ ಮೃತಪಟ್ಟಿದ್ದಾರೆ ತಿಳಿದು ಬಂದಿಲ್ಲ.
ವಿಷದ ಬಾಟಲಿ ಪತ್ತೆ
ಅಂಗಡಿಯ ಜಗುಲಿಯಲ್ಲಿ ವಿಷದ ಬಾಟಲಿಯೊಂದು ಪತ್ತೆಯಾಗಿದ್ದು, ಒಂದು ಬಾಟಲಿ ಖಾಲಿಯಾಗಿದ್ದು ಇನ್ನೊಂದು ಬಾಟಲಿಯಲ್ಲಿ ಅರ್ಧ ವಿಷವಿತ್ತು. ಆದರೆ ಮೃತ ದೇಹದ ಬಳಿಯಲ್ಲಿ ಸಾಕಷ್ಟು ರಕ್ತ ಹರಿದಿರುವ ಕಾರಣ ಸಾವಿನ ಕುರಿತು ಸಂಶಯ ವ್ಯಕ್ತವಾಗಿದೆ. ಆದರೆ ಮೇಲ್ನೋಟಕ್ಕೆ ಮೃತ ದೇಹದ ಮೈಮೇಲೆ ಯಾವುದೇ ಗಾಯಗಳು ಗೋಚರಿಸದ ಕಾರಣ ಪ್ರಕರಣ ನಿಗೂಢತೆಯನ್ನು ಸೃಷ್ಟಿಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.