×
Ad

ದೇಶಕ್ಕೇ ಮಾದರಿಯೆನಿಸುವ ಕ್ರೀಡಾ ನೀತಿ ರಚನೆ: ಸಚಿವ ಪ್ರಮೋದ್

Update: 2016-09-27 20:37 IST

ಉಡುಪಿ, ಸೆ.27: ರಾಜ್ಯದ ಜನತೆ ಬಹುಸಮಯದಿಂದ ನಿರೀಕ್ಷಿಸುತ್ತಿರುವ ಕ್ರೀಡಾ ನೀತಿಯೊಂದನ್ನು ರೂಪಿಸುವ ಕುರಿತಂತೆ ಈಗಾಗಲೇ ಕಲುಬುರ್ಗಿ ಹಾಗೂ ಇಂದು ಉಡುಪಿಯಲ್ಲಿ ಅಭಿಪ್ರಾಯ ಸಂಗ್ರಹ ಸಭೆಯನ್ನು ನಡೆಸಲಾಗಿದ್ದು, ಇನ್ನು ಮುಂದೆ ಬೆಳಗಾವಿ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಕ್ರೀಡಾಪಟುಗಳು, ಕ್ರೀಡಾತರಬೇತುದಾರರು, ಕ್ರೀಡಾ ಪ್ರೋತ್ಸಾಹಕರು ಮತ್ತು ಕ್ರೀಡಾ ಸಂಘಸಂಸ್ಥೆಗಳಿಂದ ಸಂಗ್ರಹಿಸುವ ಅಭಿಪ್ರಾಯಗಳನ್ನು ಕ್ರೂಡೀಕರಿಸಿ ಇಡೀ ದೇಶಕ್ಕೆ ಮಾದರಿ ಎನಿಸುವ ಅತ್ಯುತ್ತಮವಾದ ಕ್ರೀಡಾ ನೀತಿಯೊಂದನ್ನು ರೂಪಿಸಿ ಶೀಘ್ರದಲ್ಲೇ ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದು ರಾಜ್ಯದ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದ್ದಾರೆ.

ಮಂಗಳವಾರ ಉಡುಪಿಯ ಪುರಭವನದಲ್ಲಿ ರಾಜ್ಯದ ಕ್ರೀಡಾ ನೀತಿಯ ಬಗ್ಗೆ ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕ್ರೀಡಾಪಟು, ತರಬೇತುದಾರರು, ಕ್ರೀಡಾ ಸಂಘಟಕರು ಹಾಗೂ ಸಂಘ ಸಂಸ್ಥೆಗಳ ಅಭಿಪ್ರಾಯ ಸಂಗ್ರಹ ಸಭೆಯ ಕೊನೆಯಲ್ಲಿ ಮಾತನಾಡುತಿದ್ದರು.

ಅಭಿಪ್ರಾಯ ಸಂಗ್ರಹ ಸಭೆಗಳಿಂದ ವ್ಯಕ್ತವಾಗುವ ಅಭಿಪ್ರಾಯಗಳೊಂದಿಗೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ವೈದ್ಯಕೀಯ ಹಾಗೂ ಆರೋಗ್ಯ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳಿಗೆ ಕ್ರೀಡಾ ನೀತಿ ಕುರಿತ ವರದಿಯನ್ನು ಸಲ್ಲಿಸಲಾಗುವುದು ಎಂದವರು ನುಡಿದರು.

ಕ್ರೀಡಾನೀತಿಯಲ್ಲಿ ಖಾಸಗಿ ಸಂಸ್ಥೆಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ಕ್ರೀಡಾ ಉತ್ತೇಜನಕ್ಕೆ ಬಳಸುವುದರ ಕುರಿತು ಹಾಗೂ ರಾಜ್ಯದ ಸುಮಾರು 500 ಕ್ರೀಡಾಪಟುಗಳ ಮೇಲ್ವಿಚಾರಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವುದರ ಕುರಿತು ಚಿಂತನೆ ನಡೆಸಲಾಗಿದೆ. ಅಲ್ಲದೇ ಖಾಸಗಿ ಸಂಸ್ಥೆಗಳಿಂದ ಕ್ರೀಡಾಂಗಣ ಗಳನ್ನು ನಿರ್ಮಾಣ ಮಾಡಿಸಿ, ಕ್ರೀಡಾಂಗಣಗಳ ಬಳಕೆಯನ್ನು ಸರಕಾರ ಮತ್ತು ಖಾಸಗಿಯಾಗಿ ಬಳಸಿಕೊಳ್ಳುವ ಕುರಿತು ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.

ಈ ಮುನ್ನ ಸಭಿಕರೊಬ್ಬರು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಪ್ರಮೋದ್, ನರೇಗಾದಲ್ಲಿ 30 ಕೋಟಿ ರೂ.ಗಳನ್ನು ಕ್ರೀಡಾಕ್ಷೇತ್ರಕ್ಕಾಗಿ ಕಾದಿರಿಸಲಾಗಿದೆ. ಇದನ್ನು ಬಳಸಿಕೊಂಡು ಪ್ರತಿ ಗ್ರಾಪಂಗಳು ತಮ್ಮಲ್ಲಿ ಕ್ರೀಡಾಂಗಣಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿದೆ ಎಂದರು.

ಖಾಸಗಿ ಸಂಸ್ಥೆಗಳು ಜೊತೆಗಿರಲಿ

ಕ್ರೀಡಾನೀತಿ ರಚಿಸುವ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೋಹನ್ ಆಳ್ವ ಮಾತನಾಡಿ, ಶಿಕ್ಷಣದ ಜೊತೆಗೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು. 14ನೇ ವಯಸ್ಸಿನಲ್ಲಿ 7ನೇ ತರಗತಿಯಿಂದ ಪ್ರಾರಂಭ ಗೊಂಡು ಪದವಿ ಶಿಕ್ಷಣದ ವೇಳೆಗೆ ಒಬ್ಬ ಕ್ರೀಡಾಪಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತೆ ನೀತಿ ಯನ್ನು ರೂಪಿಸಬೇಕು ಎಂದರು.

ಕ್ರೀಡಾಪಟುಗಳನ್ನು ರೂಪಿಸುವ ಖಾಸಗಿ ಸಂಸ್ಥೆಗಳಿಗೆ ಸರಕಾರದ ನೆರವು ಸಿಗಬೇಕು. ಕ್ರೀಡಾಪಟುಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೃಪಾಂಕಗಳನ್ನು ನೀಡಬೇಕು. ಶಾಲೆಗಳಲ್ಲಿ ದೈಹಿಕ ಶಿಕ್ಷಕರ ನೇಮಕ ಆಗಬೇಕು. ಅವರ ನಿರಂತರ ಅವಲೋಕನ ನಡೆಯಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡಾ ಚಟುವಟಿಕೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು, ಕ್ರೀಡಾ ಸಾಮಗ್ರಿಗಳು ಇರಬೇಕು. ವರ್ಷದಲ್ಲಿ ನಡೆಯುವ ಕ್ರೀಡಾಕೂಟಗಳ ಕುರಿತು ವ್ಯವಸ್ಥಿತ ಕ್ಯಾಲೆಂಡರ್ ಸಿದ್ದಪಡಿಸಬೇಕು. ಖಾಸಗಿ ಮತ್ತು ಸರಕಾರಿ ಇಲಾಖೆಗಳಲ್ಲಿ ಕ್ರೀಡಾಪಟುಗಳ ನೇಮಕಕ್ಕೆ ಆದ್ಯತೆ ನೀಡಬೇಕು. ಕ್ರೀಡಾ ಚಟುವಟಿಕೆಗೆ ಅಸೋಸಿಯೇಷನ್‌ಗಳು ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ರಾಜ್ಯದ ಬಜೆಟ್‌ನಲ್ಲಿ ಕ್ರೀಡೆಗೆ ಇನ್ನೂ ಹೆಚ್ಚಿನ ಅನುದಾನ ನಿಗದಿಯಾಗಬೇಕು ಹಾಗೂ ಅವುಗಳ ಸದ್ಭಳಕೆಯಾಗ ಬೇಕು. ರಾಜ್ಯಮಟ್ಟದಲ್ಲಿ ಸಮಗ್ರ ಕೀಡಾಸ್ಪರ್ಧೆ ಏರ್ಪಡಿಸಿ ಕ್ರೀಡಾಪಟುಗಳನ್ನು ಗುರುತಿಸುವಂತಾಗಬೇಕು ಎಂದು ಡಾ. ಆಳ್ವ ಅಭಿಪ್ರಾಯ ವ್ಯಕ್ತಪಡಿಸಿದರು.

ಕ್ರೀಡಾ ಸಂಶೋಧನಾ ಕೇಂದ್ರ

ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಮಾತನಾಡಿ, ಕ್ರೀಡಾಪಟುಗಳ ಟ್ಯಾಲೆಂಟ್ ಹಂಟ್ ಯೋಜನೆ ಜಾರಿಗೆ ಬರಲಿ. ಗ್ರಾಮೀಣ ಕ್ರೀಡಾಪ್ರತಿಭೆ ಗಳನ್ನು ಹೆಚ್ಚು ಹೆಚ್ಚು ಗುರುತಿಸಿ ಪ್ರೋತ್ಸಾಹಿಸಬೇಕು. ತರಬೇತುದಾರರಿಗೂ ಸಹ ಪ್ರೋತ್ಸಾಹ ದೊರಕಬೇಕು. ಕ್ರೀಡೆಗಾಗಿಯೇ ಪ್ರತ್ಯೇಕವಾದ ಕ್ರೀಡಾ ತರಬೇತಿ ಹಾಗೂ ಸಂಶೋಧನಾ ಸಂಸ್ಥೆಯೊಂದನ್ನು ಪ್ರಾರಂಭಿಸಬೇಕು. ರಾಜ್ಯದ ವಿವಿಧ ಕ್ರೀಡಾ ಸಂಸ್ಥೆಗಳ ಮೇಲೆ ನಿಗಾ ಇಡಬೇಕು. ಕ್ರೀಡಾಪಟುಗಳಿಗೆ ಮೀಸಲಾತಿ ಇರಬೇಕು. ರಾಜ್ಯ ತಂಡದ ಆಯ್ಕೆ ಪಾರದರ್ಶಕವಾಗಿರಬೇಕು. ಕ್ರೀಡಾ ಪ್ರೋತ್ಸಾಹ ಧನದ ಹೆಚ್ಚಳ, ವಿಕಲ ಚೇತನ ಕ್ರೀಡಾಪಟುಗಳಿಗೆ ಪ್ರೋತ್ಸಾಹ ದೊರೆಯಬೇಕು ಎಂದರು.

ಅಂತಾರಾಷ್ಟ್ರೀಯ ಕ್ರೀಡಾಪಟು, ತರಬೇತುದಾರ ದಿನೇಶ್ ಕುಂದರ್ ಮಾತನಾಡಿ, ಕ್ರೀಡಾಪಟುಗಳಿಗೆ ಆಧುನಿಕ ಉಪಕರಣಗಳು ಮತ್ತು ಮೂಲ ಸೌಕರ್ಯ ಸಿಗಬೇಕು. ತರಬೇತುದಾರರು ಪ್ರತಿಭೆಗಳನ್ನು ಗುರುತಿಸಿ, ತರಬೇತಿ ನೀಡಬೇಕು.ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸರಕಾರದಿಂದ ಹೆಚ್ಚಿನ ನೆರವು ಸಿಗಬೇಕು. ಕ್ರೀಡಾ ಇಲಾಖೆಗೆ ಪ್ರತ್ಯೇಕ ಅನುದಾನ ಮತ್ತು ಉತ್ತಮ ಅಧಿಕಾರಿಗಳ ನೇಮಕ ಆಗಬೇಕು ಎಂದರು.

ಕ್ರೀಡಾಪಟು, ಕ್ರೀಡಾ ತರಬೇತುದಾರ ಹಾಗೂ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಫಾ. ಗೋಮ್ಸ್ ಮಾತನಾಡಿ, ಕ್ರೀಡಾಔಷಧಿಗಳ ಬಳಕೆ ಬಗ್ಗೆ, ಕ್ರೀಡಾಪಟುಗಳಿಗೆ ಮಾನಸಿಕ ಸಿದ್ದತೆಗೊಳಿಸಲು ಗೈಡ್ ಮತ್ತು ಕೌನ್ಸಿಲರ್‌ಗಳ ನೇಮಕ, ಇತರೆ ದೇಶಗಳ ಕ್ರೀಡಾಪಟುಗಳನ್ನು ಅಭ್ಯಸಿಸಿ ಇಲ್ಲಿನ ಕ್ರೀಡಾಪಟುಗಳಿಗೆ, ಬಾಲ್ಯದಲ್ಲಿಯೇ ತರಬೇತಿ ನೀಡಬೇಕು. ಕ್ರೀಡಾಪಟುಗಳು ಮಾನಸಿಕವಾಗಿ ಸದೃಢರಾಗಿರುವಂತೆ, ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಚಿಕ್ಕಮಗಳೂರು ಜಿಲ್ಲೆಯ ಶಿವಕುಮಾರ್, ನಳಿನಿ ಡೇಸಾ, ದೈಹಿಕ ಶಿಕ್ಷಕಿ ಲವೀನಾ, ಬಾಣೂರು ಚೆನ್ನಪ್ಪ, ಮಂಗಳೂರಿನ ಶ್ರೀಧರ ಶೆಟ್ಟಿ ಮಾತನಾಡಿದರು.

ಅಂಪಾರು ಶಾಲೆಯ ಕ್ರೀಡಾ ತರಬೇತುದಾರ ಕೃಷ್ಣ ಶೆಣ್ಯೆ ಮಾತನಾಡಿ, ಕಂಪೆನಿಗಳು ಸಿಎಸ್‌ಆರ್ ನಿಧಿಯನ್ನು ಕಡ್ಡಾಯವಾಗಿ ಕ್ರೀಡಾ ಚಟುವಟಿಕೆಗಳಿಗೆ ಬಳಸಬೇಕು, ಕ್ರೀಡಾ ಹಾಸ್ಟೆಲ್‌ಗಳಲ್ಲಿ ಪಾರದರ್ಶಕ ನೇಮಕ ಆಗಲಿ ಎಂದರು. ಸೀತಾನದಿ ವಿಠಲ ಶೆಟ್ಟಿ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಕ್ರೀಡಾ ನಿರ್ದೇಶನಾಲಯ ಪ್ರಾರಂಭವಾಗಲಿ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಅನುಪಮ್ ಅಗರ್‌ವಾಲ್, ಈ ಬಾರಿಯಿಂದ ಕ್ರೀಡಾ ಪ್ರಶಸ್ತಿಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗುತ್ತಿದ್ದು, ಆನ್‌ಲೈನ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಅರ್ಹತೆ, ಮಾನದಂಡ, ತಿರಸ್ಕೃತ ಕುರಿತು ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದರು.
 ಕ್ರೀಡಾ ನೀತಿ ರಚನಾ ಸಮಿತಿಗೆ ಪುತ್ತೂರಿನ ಫಾ.ಗೋಮ್ಸ್‌ರನ್ನು ವಿಶೇಷ ಆಹ್ವಾನಿತರನ್ನಾಗಿ ನೇಮಿಸಿ ಸಭೆಯಲ್ಲೇ ಆದೇಶಿಸಿದರು.

ಸಭೆಯಲ್ಲಿ ಉಡುಪಿ ಜಿಪಂನ ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ ದಿನೇಶ್ ಪುತ್ರನ್ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News