×
Ad

ರಾಷ್ಟ್ರೀಯ ಸೇವಾ ಯೋಜನೆ: ಸ್ವಯಂಸೇವಕರೊಂದಿಗೆ ಸಂವಾದ

Update: 2016-09-27 23:50 IST

ಉಡುಪಿ, ಸೆ.27: ಯಾವುದೇ ಫಲಾಪೇಕ್ಷೆಗಳನ್ನು ಬಯಸದೆ ಸೇವೆ ನೀಡುವುದು ರಾಷ್ಟ್ರೀಯ ಸೇವಾ ಯೋಜನೆ ಉದ್ದೇಶ. ಈ ನಿಟ್ಟಿನಲ್ಲಿ ಇನ್ನಷ್ಟು ರಚನಾತ್ಮಕವಾಗಿ ಎನ್ನೆಸ್ಸೆಸ್ ರೂಪಿಸಬೇಕಿದೆ ಎಂದು ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಪುರಭವನದ ಬಳಿಯ ಸಭಾಂಗಣದಲ್ಲಿ ಮಂಗಳೂರು ವಿವಿಯ ರಾಷ್ಟ್ರೀಯ ಸೇವಾ ಯೋಜನೆಯಡಿ ಆಯೋಜಿಸಲಾದ ರಾಷ್ಟ್ರೀಯ ಸೇವಾ ಯೋಜನಾ ಸ್ವಯಂ ಸೇವಕರೊಂದಿಗೆ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಸಕ್ತ 3,50,000ರಷ್ಟಿರುವ ಎನ್ನೆಸ್ಸೆಸ್ ವಿದ್ಯಾರ್ಥಿಗಳ ಸಂಖ್ಯೆಯನ್ನು 10 ಲಕ್ಷಕ್ಕೆ ಏರಿಸುವುದು ಮತ್ತು ಹೊಸ ಸಿದ್ಧ ನೀತಿಯೊಂದಿಗೆ ಎನ್ನೆಸ್ಸೆಸ್‌ಗೆ ಹೊಸ ಚೈತನ್ಯ ನೀಡುವುದು ಇದರ ಉದ್ದೇಶ ಎಂದರು.
 ಅಲ್ಲದೆ ಈಗಾಗಲೇ ಬೆಳಗಾವಿ, ಕಲಬುರಗಿಯಲ್ಲಿ ಈ ಸಂಬಂಧ ಸಭೆಗಳನ್ನು ನಡೆಸಲಾಗಿದ್ದು, ಇಂದು ಮೈಸೂರು, ಬೆಂಗಳೂರು ವಿಭಾಗದ ಸಭೆಗಳೂ ಇಲ್ಲಿ ನಡೆದಿವೆ. ಈ ಹೊಸ ಕಾರ್ಯಕ್ರಮ ನೂತನ ಶಕೆಗೆ ನಾಂದಿ ಬರೆಯಲಿದೆ ಎಂದರು.
ರಾಜ್ಯದ ಬೆಂಗಳೂರು, ಮೈಸೂರು ಹಾಗೂ ಕುವೆಂಪು ವಿವಿಗಳ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಮಂಡಿಸಿದರು.
ಸಚಿವರ ಆಪ್ತ ಕಾರ್ಯದರ್ಶಿ ಡಾ.ಕೆ.ಎನ್.ವಿಜಯಪ್ರಕಾಶ್, ಎನ್ನೆಸ್ಸೆಸ್ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಎ.ಎನ್.ಪೂಜಾರ್, ರಾಜ್ಯ ಘಟಕದ ಅಧ್ಯಕ್ಷ ಗಣನಾಥ ಎಕ್ಕಾರ್, ಮಂಗಳೂರು ವಿವಿಯ ಯೋಜನಾಧಿಕಾರಿ ಡಾ.ವಿನಿತಾ ರೈ. ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜಿನ ಎನ್ನೆಸ್ಸೆಸ್ ಘಟಕದ ಮುಖ್ಯಸ್ಥ ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News